ಬಂಟ್ವಾಳ: ರಂಗಭೂಮಿ ಟ್ರಸ್ಟ್, ಕೊಡಗು ಪ್ರಸ್ತುತಪಡಿಸುವ ಸತ್ಯ ಘಟನೆಯ ಆಧಾರಿತ ಚಾರಿತ್ರಿಕ ನಾಟಕ ‘ಸತ್ಯವನ್ನೇ ಹೇಳುತ್ತೇನೆ’ ಮಾರ್ಚ್ 11, ಮಂಗಳವಾರ ಸಂಜೆ 6:00 ಗಂಟೆಗೆ ಬಿಸಿರೋಡು ಸ್ಪರ್ಶ ಕಲಾ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ನ್ಯಾಯವಾದಿ ಪ್ರಸಾದ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀನಾಸಂ ತಂಡದ ಅಡ್ಡಂಡ ಕಾರ್ಯಪ್ಪ ನಿರ್ದೇಶಿಸಿದ ಈ ನಾಟಕವು ರಾಜ್ಯದ ಹಲವು ಭಾಗಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಇದು ಸತ್ಯ ಅನಾವರಣಗೊಳ್ಳುವ ಆಪ್ತಸಾಕ್ಷಿಯ ನ್ಯಾಯಾಲಯ! ಹಳ್ಳಿಯ ಪ್ರಾಮಾಣಿಕ ರೈತನೊಬ್ಬ ನ್ಯಾಯಾಧೀಶ, ಮಹಿಳೆಯೊಬ್ಬಳು ನ್ಯಾಯವಾದಿ, ಮತ್ತು ನ್ಯಾಯಾಲಯಕ್ಕೆ ಹಾಜರಾಗುವವರು ಹಲವು ಐತಿಹಾಸಿಕ ಮಹನೀಯರು. ಬಚ್ಚಿಟ್ಟಿದ್ದ ಸುಳ್ಳಿನ ಪರದೆ ಸರಿದು, ಸತ್ಯ ಬೆಳಕಿಗೆ ಬರುವ ಈ ನಾಟಕ ಕನ್ನಡ ರಂಗಭೂಮಿಯಲ್ಲಿ ಹೊಸ ಪ್ರಯತ್ನವಾಗಿದೆ. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ, ಬಂಟ್ವಾಳ ಪ್ರಖಂಡದ ಆಶ್ರಯದಲ್ಲಿ ಈ ನಾಟಕದ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಸಮಾಜದ ಸತ್ಯ ಮತ್ತು ಮೌಲ್ಯಗಳನ್ನು ತೋರಿಸುವ ಈ ನಾಟಕವು ಎಲ್ಲಾವಯಸ್ಸಿನ ಪ್ರೇಕ್ಷಕರಿಗೆ ಪ್ರೇರಣಾದಾಯಕವಾಗಲಿದೆ. ಆಯೋಜಕರು ಎಲ್ಲ ಕಲಾ ಪ್ರೇಮಿಗಳನ್ನೂ ಹಿತೈಷಿಗಳನ್ನು ಈ ನಾಟಕ ವೀಕ್ಷಣೆಗಾಗಿ ಆತ್ಮೀಯವಾಗಿ ಆಹ್ವಾನಿಸಿದ್ದಾರೆ.