ಪ್ರವಾಸಿಗರ ರಕ್ಷಣೆಯಲ್ಲೂ ರಾಜ್ಯ ಸರ್ಕಾರ ವೈಫಲ್ಯ!; ಹಂಪಿಯಲ್ಲಿ ವಿದೇಶಿ ಮಹಿಳಾ ಪ್ರವಾಸಿಗರ ಮೇಲೆ ಭೀಕರ ಅತ್ಯಾಚಾರ!

  • 11 Mar 2025 09:08:23 AM

ಹಂಪಿ: ಪ್ರವಾಸಿಗರ ಸ್ವರ್ಗ' ಎಂದು ಕರೆಸಿಕೊಳ್ಳುವ ಹಂಪಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಜನರನ್ನು ದಿಗ್ಭ್ರಮೆಗೊಳಿಸಿದೆ. ಮಾರ್ಚ್ 6 ರಂದು ತುಂಗಭದ್ರ ಎಡದಂಡೆ ಕಾಲುವೆ ಬಳಿ ತಡರಾತ್ರಿಯವರೆಗೆ ಸಂಗೀತ ಕೇಳುತ್ತಾ ಕುಳಿತುಕೊಂಡಿದ್ದ ಇಸ್ರೇಲಿ ಮಹಿಳೆ ಮತ್ತು ಹೋಮ್ ಸ್ಟೇ ಮಾಲಕಿ ಮೇಲೆ 3 ಜನರು ಹಲ್ಲೆ ನಡೆಸಿ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು.

 

ಇದೀಗ ಈ ಪ್ರಕರಣದ ಮೂರನೇ ಆರೋಪಿಯನ್ನು ಕೂಡಾ ಅರೆಸ್ಟ್ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಮಾಹಿತಿ ನೀಡಿದ್ದಾರೆ. ಅಲ್ಲದೆ ಈ ವೇಳೆ ಸ್ಥಳದಲ್ಲಿದ್ದ ಇತರೆ ಮೂರು ಪುರುಷರ ಮೇಲೂ ಹಲ್ಲೆ ಮಾಡಿ ಕಾಲುವೆಗೆ ತಳ್ಳಿದ್ದರು. ಈ ಪೈಕಿ ನಾಪತ್ತೆಯಾಗಿದ್ದ ಪ್ರವಾಸಿಯ ಶವ ಇಂದು ತುಂಗಭದ್ರಾ ಎಡದಂಡೆ ಕಾಲುವೆ ಬಳಿ ಪತ್ತೆಯಾಗಿದೆ. 

 

ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಏನ್ ಹೇಳ್ತಾರೆ...?

 

ಈ ಬಗ್ಗೆ ಪೊಲೀಸ್ ಅಧಿಕಾರಿ ಮಾತನಾಡಿ `ಕರ್ನಾಟಕದ ಪ್ರವಾಸಿ ತಾಣಗಳಲ್ಲಿ ಒಂದಾದ ಹಂಪಿಯ ಸಮೀಪ ಈ ಕೃತ್ಯ ನಡೆದಿರುವುದು ಖೇದಕರ. ಈ ಪ್ರಕರಣದ ಹತ್ತು ದಿನದ ಮೊದಲು ಅತ್ಯಾಚಾರಗೈದ ವ್ಯಕ್ತಿ ಇಲ್ಲಿ ಸರಗಳ್ಳತನಕ್ಕೆ ಯತ್ನಿಸಿದ್ದ. ಆದರೆ ಸಂತ್ರಸ್ತರು ದೂರು ದಾಖಲಿಸಿರಲಿಲ್ಲ.

 

ಒಂದು ವೇಳೆ ಅವರು ಆಗಲೇ ಕೇಸ್ ದಾಖಲಿಸಿದ್ದರೆ ಈ ಪ್ರಕರಣ ನಡೆಯುತ್ತಿರಲಿಲ್ಲ. ಆರೋಪಿಗಳು ಕಟ್ಟಡ ಕಾರ್ಮಿಕರಾಗಿದ್ದು ಮಾದಕ ವ್ಯಸನಿಗಳೆಂದು ತಿಳಿದುಬಂದಿದೆ. ಆದ್ದರಿಂದಲೇ ಈ ದುಷ್ಕೃತ್ಯ ಎಸಗಿದ್ದಾರೆ. ತನಿಖೆ ಮುಂದುವರೆಯುತ್ತಿದೆ' ಎಂದು ಹೇಳಿದ್ದಾರೆ. 

 

ಹಂಪಿಯಲ್ಲಿ ಭದ್ರತೆ ಹೆಚ್ಚಿಸಲು ಆಗ್ರಹ...!

 

ಇಲ್ಲಿ ಸುತ್ತಲೂ ಇರುವ ದೇವಸ್ಥಾನ, ಹೋಟೆಲ್‌‌ಗಳ ಬಳಿ‌ ಕ್ಯಾಮೆರಾ ಇವೆ. ಆದರೆ, ಪ್ರವಾಸಿಗರು ಹೆಚ್ಚಾಗಿ ತೆರಳುವ ತುಂಗಭದ್ರಾ ನದಿಯ ಸಮೀಪ ಸಿಸಿ ಕ್ಯಾಮೆರಾ ಇಲ್ಲ. ಪೊಲೀಸರ ಓಡಾಟವೂ ಕಡಿಮೆ. ಘಟನೆ ನಡೆದಾಗ ಮಾತ್ರ ಹೆಚ್ಚು ನಿಗಾ ವಹಿಸುತ್ತಾರೆ. ನಿರ್ಜನ, ಅಪಾಯಕಾರಿ ಪ್ರದೇಶಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸ್ಥಳೀಯರೇ ಆರೋಪ ಮಾಡುತ್ತಾರೆ.

 

ಆದರೆ, ಪೊಲೀಸರ ಗಮನಕ್ಕೆ ಬೆರಳೆಣಿಕೆಯ ಪ್ರಕರಣಗಳು ಮಾತ್ರ ಬರುತ್ತಿವೆ. ಇದು ನಿರ್ಲಕ್ಷ್ಯ ಧೋರಣೆಯನ್ನು ಪ್ರತಿಬಿಂಬಿಸುತ್ತಿದ್ದು ಶೀಘ್ರದಲ್ಲೇ ಕ್ರಮ ವಹಿಸಬೇಕಾಗಿದೆ. ಇನ್ನು ಪ್ರವಾಸೋದ್ಯಮ ಇಲಾಖೆಯಿಂದ ಪರ್ಮಿಷನ್ ಪಡೆದು ನಡೆಸುತ್ತಿರುವ ಅಧಿಕೃತ ಹೋಮ್ ಸ್ಟೇಗಳು ಕೂಡಾ ಇಲ್ಲ. ಈ ಎಲ್ಲದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗಬೇಕಾಗಿದೆ.