ಫರಂಗಿಪೇಟೆ: ತುಳುನಾಡಿನಲ್ಲಿ ನಡೆದ ದೈವದ ಕಾರ್ಣಿಕ, ಪವಾಡಗಳಿಗೆ ಲೆಕ್ಕವಿಲ್ಲ. ಕರಾವಳಿಯಲ್ಲಿ ಜನ ದೇವರನ್ನು ನಂಬುವಷ್ಟೇ ಶ್ರದ್ಧಾ ಭಕ್ತಿಯಿಂದ ದೈವವನ್ನೂ ಆರಾಧಿಸುತ್ತಾರೆ. ಕಷ್ಟ ಎಂದು ಬಂದಾಗ ಹರಕೆ ಹೇಳಿಕೊಳ್ಳುವುದರ ಮುಖೇನ ದೈವಕ್ಕೆ ತಮ್ಮ ನೋವನ್ನು ಸಮರ್ಪಿಸಿಕೊಳ್ಳುತ್ತಾರೆ. ದೈವವೂ ನಂಬಿದವರ ಕೈ ಬಿಡದೆ ತನ್ನ ಇರುವಿಕೆಯನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತದೆ. ನಾಪತ್ತೆಯಾಗಿದ್ದ ಫರಂಗಿಪೇಟೆಯ ದಿಗಂತ್ ಪತ್ತೆಯ ಹಿಂದೆ ಕೂಡಾ ದೈವದ ಕಾರ್ಣಿಕವಿತ್ತು ಎಂಬುದಾಗಿ ಈಗ ಹೇಳಲಾಗುತ್ತಿದೆ.
ಅರ್ಕುಳ ಜಾತ್ರೆಯ ಕೊಡಿ ಇಳಿಯುವ ಮೊದಲೇ ದಿಗಂತ್ ಪತ್ತೆ...!!
ಅರ್ಕುಳ ಶ್ರೀ ಉಳ್ಳಾಕು ಮಗ್ನಂತಾಯಿ ಕ್ಷೇತ್ರಕ್ಕೆ ತನ್ನದೇ ಆದ ಜನಪ್ರಿಯತೆ, ಕಾರಣಿಕತೆ ಇದೆ. ಅದೆಷ್ಟೋ ತುಳುವರು ಈ ಕ್ಷೇತ್ರವನ್ನು ಹೆಚ್ಚಾಗಿ ನಂಬುತ್ತಾರೆ. ಇಲ್ಲಿ ದೈವದ ಚಾಕರಿ ಮಾಡುವ ದಿಗಂತ್ ಸಹೋದರ ಸಲ್ಲಿಸಿದ್ದ ಪ್ರಾರ್ಥನೆಯಂತೆ ಜಾತ್ರೆಯ ಕೊಡಿ ಇಳಿಯುವ ಮೊದಲೇ ದಿಗಂತ್ ಪ್ರತ್ಯಕ್ಷನಾಗಿದ್ದಾನೆ. ಹದಿಮೂರು ದಿನಗಳ ಬಳಿಕ ಈತ ಸಿಕ್ಕಿದ್ದಾನೆ. ಈ ಕ್ಷೇತ್ರದಲ್ಲಿ ದಿಗಂತ್ ನ ಪೂರ್ವಜರು ನಾಲ್ಕು ತಲೆಮಾರುಗಳಿಂದ ದೈವದ ಚಾಕರಿ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ದೀವಟಿಗೆ ಹಿಡಿಯುವ ಕೆಲಸವನ್ನು ದೊಡ್ಡಪ್ಪನ ಮಗ ರವಿ ಎಂಬವರು ದಿಗಂತ್ ಪತ್ತೆಗಾಗಿ ಸಂಕಲ್ಪ ಮಾಡಿದ್ದರು.
ಈ ಬಗ್ಗೆ ರವಿ ಅವರು ಹೇಳಿದ್ದೇನು...?
ವರ್ಷಾವಧಿ ನೇಮದ ಸಂದರ್ಭ ದಿಗಂತ್ ಕುರಿತು ದೈವದಲ್ಲಿ ಕೇಳುವಂತೆ ರವಿ ಅವರಿಗೆ ಊರವರು ಸಲಹೆ ನೀಡಿದ್ದರು. ಆಗ ಅವರು ನಾನು ದೈವದ ಬಳಿ ಕೇಳುವುದಿಲ್ಲ. ನಾನು ದೈವದ ಚಾಕರಿ ಮಾಡುವವನು. ನಮ್ಮ ಸೇವೆಗೆ ಒಲಿದು ದೈವ ದಿಗಂತ್ ನನ್ನು ಕೊಡಿ ಇಳಿಯುವ ಮೊದಲು ತೋರಿಸಿಕೊಡಬೇಕು ಎಂದು ಪ್ರಾರ್ಥಿಸಿಕೊಂಡಿದ್ದರು. ಪ್ರಾರ್ಥನೆಗೆ ಒಲಿದ ದೈವ ದಿಗಂತ್ ಸುರಕ್ಷಿತವಾಗಿ ಸಿಗುವಂತೆ ಮಾಡಿದೆ. ಈ ಮೂಲಕ ತನ್ನ ಶಕ್ತಿಯನ್ನು ಮತ್ತೆ ಸಾಬೀತುಪಡಿಸಿದೆ ಎಂದು ರವಿ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.