ಪುತ್ತೂರು|ದಾರಿ ಕೇಳೋದೇ ಇವರ ಮಾಸ್ಟರ್ ಪ್ಲ್ಯಾನ್...! ಚಿನ್ನ ಎಗರಿಸಿ ಎಸ್ಕೇಪ್ ಆದ ಕಳ್ಳರು ಹಾವಳಿಗೆ ಬ್ರೇಕ್ ಬೀಳೋದು ಯಾವಾಗ...!!?

  • 13 Mar 2025 12:33:20 PM

ಪುತ್ತೂರು: ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ಕಳ್ಳತನ ಪ್ರಕರಣಗಳು ನಡೆಯುತ್ತಿದೆ. ದ.ಕ ಜಿಲ್ಲೆಯಾದ್ಯಂತ ಕಳ್ಳರ ಹಾವಳಿ ಹೆಚ್ಚಾಗಿದೆ. ಜನರು ಕಳ್ಳರಿಗೆ ಹೆದರಿ ದಿನ ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಪುತ್ತೂರಿನಲ್ಲಿ ಒಂದೇ ಗ್ಯಾಂಗ್ ಏಕಕಾಲದಲ್ಲಿ ಅಂಗಡಿಗಳ ಮೇಲೆ ಕಳವು ಮಾಡಿದ್ದ ಪ್ರಕರಣ ಮಾಸುವ ಮುನ್ನವೇ ಇದೀಗ ಮತ್ತೆ ಪುತ್ತೂರಿನಲ್ಲಿ ಕಳ್ಳತನ ಪ್ರಕರಣವೊಂದು ನಡೆದಿದೆ. 

 

ದಾರಿ ಕೇಳುವ ನೆಪದಲ್ಲಿ ಬಂದು ಚಿನ್ನದ ಉಂಗುರ ಎಗರಿಸಿದ ಖದೀಮರು...!!

 

ದಾರಿ ಕೇಳುವ ನೆಪದಲ್ಲಿ ಬಂದು ಚಿನ್ನದ ಉಂಗುರ ಎಳೆದು ಪರಾರಿಯಾದ ಘಟನೆ ಪುತ್ತೂರಿನ ರಾಗಿದಕುಮೇರ್ ಬಳಿಯ ಅಂದ್ರಟ್ಟ ಎಂಬಲ್ಲಿ ನಡೆದಿದೆ. ರಾತ್ರಿ ವೇಳೆ ಬಂದ ಅಪರಿಚಿತ ವ್ಯಕ್ತಿ ದಾರಿ ಕೇಳಿದ್ದಾರೆ. ಈ ವೇಳೆ ದಾರಿ ಹೇಳಲು ಬಂದ ಮನೆಯವರ ಕೈಯಲ್ಲಿದ್ದ ಉಂಗುರವನ್ನು ಕಿತ್ತು ಬೈಕ್ ನಲ್ಲಿ ಪರಾರಿಯಾಗಿದ್ದಾನೆ‌. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. 

 

ಕಳ್ಳರ ಹಾವಳಿಗೆ ಸುಸ್ತಾದ ಪುತ್ತೂರು ಜನತೆ...!

 

ಇತ್ತೀಚೆಗೆ ಈ ಭಾಗದಲ್ಲಿ ಅನೇಕ ರೀತಿಯ ಕಳ್ಳತನ ಪ್ರಕರಣಗಳು ನಡೆಯುತ್ತಿದೆ. ಇತ್ತೀಚೆಗೆ ಪುತ್ತೂರಿನ ಪೇಟೆಯಲ್ಲಿ ರಾತ್ರೋ ರಾತ್ರಿ ಅನೇಕ ಅಂಗಡಿಗಳಿಗೆ ಏಕಕಾಲದಲ್ಲಿ ನುಗ್ಗಿ ದೋಚಿರೋದು ಜನರನ್ನು ಭಯಭೀತರನ್ನಾಗಿಸಿತ್ತು. ಇದೀಗ ಮತ್ತೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಕಳ್ಳರ ಹಾವಳಿಗೆ ಪೊಲೀಸ್ ವ್ಯವಸ್ಥೆ ಏನಾದರೂ ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ.