ಪುತ್ತೂರು: ವಿದ್ಯಾರ್ಥಿಗಳ ಸುರಕ್ಷತೆಯ ಹಿತ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನ ಎದುರು ಬದಿಯ ರಸ್ತೆಯಲ್ಲಿ ಜೀಬ್ರಾ ಕ್ರಾಸಿಂಗ್ ಅನ್ನು ಅಳವಡಿಸಲಾಗಿದೆ. ಈ ಸಾಧನೆಯು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು (ABVP) ವಿವೇಕಾನಂದ ಕಾನೂನು ಕಾಲೇಜು ಘಟಕದ ನಿರಂತರ ಹೋರಾಟದ ಪ್ರತಿಫಲವಾಗಿದೆ.
ಸತತ ಮನವಿ, ಹೋರಾಟ, ಮತ್ತು ಭರವಸೆಯ ಫಲ:
ಕಾಲೇಜಿನ ಎದುರು ಭಾಗದ ಮುಖ್ಯ ರಸ್ತೆಯಲ್ಲಿ ವಿದ್ಯಾರ್ಥಿಗಳು, ಸ್ಥಳೀಯರು ಹಾಗೂ ಹಿರಿಯರು ಸುರಕ್ಷಿತವಾಗಿ ರಸ್ತೆ ದಾಟಲು ಯಾವುದೇ ವ್ಯವಸ್ಥೆಗಳು ಇರಲಿಲ್ಲ. ಈ ಕುರಿತು ABVP ವಿದ್ಯಾರ್ಥಿ ಘಟಕ ಹಲವು ವರ್ಷಗಳಿಂದ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸುತ್ತಿದ್ದರೂ ಪ್ರಾಥಮಿಕ ಹಂತದಲ್ಲಿ ಈ ಮನವಿಗೆ ಯಾವುದೇ ರೀತಿಯ ಸ್ಪಂದನೆ ದೊರಕದೆ, ಹೋರಾಟ ಮುಂದುವರಿಸಲಾಗಿತ್ತು.
2024ರ ಕೊನೆಯ ಹಂತದಲ್ಲಿ, ಈ ಸಮಸ್ಯೆಯನ್ನು ಪ್ರಧಾನಮಂತ್ರಿ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಗಮನಕ್ಕೆ ತರಲಾಯಿತು.
ಈ ಸಂದರ್ಭದಲ್ಲಿ ಪುತ್ತೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಕೂಡ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಕೊನೆಗೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ಬೇಡಿಕೆಗೆ ಒಪ್ಪಿಗೆ ನೀಡಿ, ಜೀಬ್ರಾ ಕ್ರಾಸಿಂಗ್ ಅಳವಡಿಸುವ ಮೂಲಕ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡಿದ್ದಾರೆ.
ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಹಿತಕರ ನಿರ್ಧಾರ:
ಈ ಹೊಸ ವ್ಯವಸ್ಥೆಯಿಂದ ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯರು ಹಾಗೂ ಹಿರಿಯರು ಸುರಕ್ಷಿತವಾಗಿ ರಸ್ತೆ ದಾಟಬಹುದಾಗಿದೆ. ಈ ನಿರ್ಧಾರಕ್ಕಾಗಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೂ, ಮತ್ತು ವಿಶೇಷವಾಗಿ ಸ್ಪಂದಿಸಿದ ಸಂಸದ ಬ್ರಿಜೇಶ್ ಚೌಟ ಅವರಿಗೆ ವಿದ್ಯಾರ್ಥಿ ಪರಿಷತ್ತಿನ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನ ಸಲ್ಲಿಸಿದೆ.
"ವಿದ್ಯಾರ್ಥಿ ಶಕ್ತಿ ಗುಡುಗಿದರೆ, ವಿಧಾನಸೌಧ ನಡುಗುವುದು" ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ಸಮಸ್ಯೆ ಎದುರಾದರೆ ಪ್ರಶ್ನಿಸೋಣ ಇದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯ!