ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮದ ಹಾಲಿನ ಡೈರಿ ಬಳಿಯ ರೈಲ್ವೇ ಹಳಿಯಲ್ಲಿ ಅನಾಮಿಕ ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾರ್ಚ್ 16 ರಂದು ಸಂಜೆ ನಡೆದಿದೆ ಎಂದು ವರದಿಯಾಗಿದೆ.
ಬಾರ್ಕೂರು ರೈಲ್ವೇ ಗ್ಯಾಂಗ್ ಮ್ಯಾನ್ ಆದ ಮಟಪಾಡಿ ಗ್ರಾಮದ ಪ್ರಶಾಂತ್ ಅವರಿಗೆ ಸಂಜೆ 4:15 ರ ವೇಳೆಗೆ ಚಾಂತಾರು ಗ್ರಾಮದ ಹಾಲಿನ ಡೈರಿಯ ಬಲಿಯ್ಯ ರೈಲ್ವೆ ಹಳಿಯಲ್ಲಿ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿಗೆ ವ್ಯಕ್ತಿಯೊಬ್ಬರು ಸಿಲುಕಿರುವ ಮಾಹಿತಿ ಲಭಿಸಿದ್ದು ಅವರು ತಕ್ಷಣ ಸ್ಥಳಕ್ಕೆ ಧಾವಿಸಿದರು. ಅಲ್ಲಿ ಸುಮಾರು 25 ರಿಂದ 35 ವರ್ಷ ವಯಸ್ಸಿನ ಅಪರಿಚಿತ ಪುರುಷನ ಮೃತದೇಹ ಛಿದ್ರಗೊಂಡ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡುಹಿಡಿದರು. ರೈಲ್ವೆ ಕಂಬ ಸಂಖ್ಯೆ 681/6 ರ ಬಳಿ ತಲೆ ಮತ್ತು ಕೈಗಳು ಪ್ರತ್ಯೇಕವಾಗಿ ಬಿದ್ದಿದು ಪತ್ತೆಯಾಗಿದೆ.
ಆತ್ಮಹತ್ಯೆಗೈದ ವ್ಯಕ್ತಿಯು ಯಾವುದೋ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂಬುದಾಗಿ ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಪ್ರಶಾಂತ್ ಅವರು ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣವನ್ನು ದಾಖಲಿಸಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕನ ಗುರುತು ಪತ್ತೆ ಹಚ್ಚುವುದಕ್ಕಾಗಿ ಪೊಲೀಸರು ತೊಡಗಿದ್ದಾರೆ.