ಬೆಳ್ತಂಗಡಿ: ಮಂಗಳೂರು 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ತೀರ್ಪಿಗೆ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ!

  • 17 Mar 2025 09:38:28 PM

ಬೆಳ್ತಂಗಡಿ:ಬೆಳ್ತಂಗಡಿ ತಾಲ್ಲೂಕು, ನೆರಿಯ ಗ್ರಾಮದ ಕಾಟಾಜೆಯಲ್ಲಿ 2015ನೇ ಇಸವಿಯಲ್ಲಿ ಸುಂದರ ಮಲೆಕುಡಿಯ ಹಾಗೂ ಗೋಪಾಲ ಗೌಡ ಮತ್ತು ಇತರರ ಮಧ್ಯೆ ಗಲಾಟೆಯಾಗಿ ಸುಂದರ ಮಲೆಕುಡಿಯರವರ ಕೈಗೆ ಗಂಭೀರ ಗಾಯವಾಗಿದೆ ಎಂದು ದೋಷಾರೋಪಣಾ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

 

 ಇದಕ್ಕೆ ಸಂಬಂಧಿಸಿದಂತೆ, ನೆರಿಯ ಗ್ರಾಮದ ಗೋಪಾಲ ಗೌಡ, ದಮಯಂತಿ, ಬಂದಾರು ಗ್ರಾಮದ ವಸಂತ, ನೆರಿಯ ಗ್ರಾಮದ ಪುಷ್ಪಲತಾರವರ ಮೇಲೆ 307, 326, 506, ಖ/ತಿ 34 ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

 

 ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಕೊಲೆ ಪ್ರಯತ್ನ ಕೇಸ್‍ನಲ್ಲಿ ಖುಲಾಸೆ/ಬಿಡುಗಡೆ ಮಾಡಿ ಗಂಭೀರ ಗಾಯ ಉಂಟು ಮಾಡಿದ್ದಕ್ಕೆ 326 ರಡಿಯಲ್ಲಿ 1ನೇ ಗೋಪಾಲ ಗೌಡರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ರೂ.1,00,000/- ದಂಡ , ದಮಯಂತಿ ಅವರಿಗೆ 2 ವರ್ಷ ಶಿಕ್ಷೆ ಹಾಗೂ 15,000/- ದಂಡ, ವಸಂತ ಅವರಿಗೆ 2 ವರ್ಷ ಶಿಕ್ಷೆ ಹಾಗೂ 15,000/- ದಂಡ ಮತ್ತು ಪುಷ್ಪಲತ ಅವರಿಗೆ 2 ವರ್ಷ ಶಿಕ್ಷೆ ಹಾಗೂ ರೂ.15,000/- ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿತ್ತು. 

 

ಸದರಿ ತೀರ್ಪಿನ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸುವವರೆಗೆ ಅಂದರೆ 30 ದಿನಗಳ ಕಾಲಾವಕಾಶದವರೆಗೆ ಆರೋಪಿಗಳನ್ನು ಜೈಲಿಗೆ ಕಳುಹಿಸದಂತೆ ವಕೀಲರು ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಿ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. 

 

ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಗೋಪಾಲ ಗೌಡ, ದಮಯಂತಿ, ವಸಂತ ಮತ್ತು ಪುಷ್ಪಲತಾ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಮಾನ್ಯ ಉಚ್ಚ ನ್ಯಾಯಾಲಯವು 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಿದೆ. ಅಪೀಲುದಾರರ ಪರವಾಗಿ ವಕೀಲರಾದ ವಿಶ್ವನಾಥ್ ದೇವಶ್ಯ ಹಾಗೂ ವಚನ್ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.