ನವದೆಹಲಿ: ಕರ್ನಾಟಕ ಸರ್ಕಾರದಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡುವ ನಿರ್ಧಾರವು ಸಮಾಜವನ್ನು ಜಾತಿ-ಮತದ ಆಧಾರದ ಮೇಲೆ ವಿಭಜಿಸುವ ಪ್ರಯತ್ನವಾಗಿರುತ್ತದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತೀವ್ರವಾಗಿ ಖಂಡಿಸಿದ್ದಾರೆ. ಸಂವಿಧಾನ ಮತ್ತು ಅಂಬೇಡ್ಕರ್ ಅವರ ಆಶಯಗಳ ವಿರುದ್ಧ ಕಾಂಗ್ರೆಸ್ ಸರ್ಕಾರ ನಡೆದುಕೊಂಡಿದೆ ಎಂದೂ, ಈ ತೀರ್ಮಾನವನ್ನು ಖಂಡಿಸಿ ಇದ್ದನ್ನು ಹಿಂಪಡೆಯುವವರೆಗೂ ಹೋರಾಟ ಮಾಡಲಿದೆ ಎಂದು ಅವರು ಹೇಳಿದ್ದಾರೆ.
"ಡಾ. ಬಿ.ಆರ್. ಅಂಬೇಡ್ಕರ್ ಮೀಸಲಾತಿಯನ್ನು ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಮಾತ್ರ ಮೀಸಲಾಗಿಸಿದ್ದರು. ಆದರೆ, ಸಿದ್ದರಾಮಯ್ಯ ಸರ್ಕಾರ ಪಿಎಫ್ಐ ಮತ್ತು ಎಸ್ಡಿಪಿಐ ಸಂಘಟನೆಗಳ ಒತ್ತಡಕ್ಕೆ ಜಗ್ಗಿ ಮತರಾಜಕಾರಣ ಮಾಡುತ್ತಿದೆ. ಇದು ಸಮಾಜ ವಿಭಜನೆಗೆ ಕಾರಣವಾಗಲಿದೆ ಎಂದು ಆರೋಪಿಸಿದರು. ಅದಲ್ಲದೇ ಈ ತೀರ್ಮಾನದ ವಿರುದ್ಧ ಬಿಜೆಪಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸುವುದರೊಂದಿಗೆ, ಕಾನೂನಾತ್ಮಕ ಹೋರಾಟವೂ ಮುಂದುವರಿಯಲಿದೆ ಎಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಅವರು ಹೇಳಿದರು.
ಬಜೆಟ್ ನಲ್ಲಿ ಮುಖ್ಯಮಂತ್ರಿ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ನಿಧಿ ಎನ್ನುವ 1000 ಕೋಟಿ ರೂ.ಗಳ ಕ್ರಿಯಾ ಯೋಜನೆಯನ್ನು ಸಿದ್ದರಾಮಯ್ಯನವರು ಘೋಷಿಸಿದ್ದಾರೆ. ಅಂಬೇಡ್ಕರ್ ಆಶಯಗಳಿಗೆ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಮ್ಮ ಸಂವಿಧಾನವನ್ನೇ ಒಡೆಯುವ ಕೆಲಸಕ್ಕೆ ಸಿದ್ದರಾಮಯ್ಯನವರು ಕೈಹಾಕಿದ್ದಾರೆ. ಆ ಮೂಲಕ ಮುಸ್ಲಿಂ ಸಮುದಾಯವನ್ನು ‘ಸಾಮಾಜಿಕ ಪ್ರತ್ಯೇಕೀಕರಣ ‘ ಮಾಡಲು ಹೊರಟಿದ್ದು, ಬಿಜೆಪಿ ಇದನ್ನು ಸ್ಪಷ್ಟ ಶಬ್ಧಗಳಿಂದ ಖಂಡಿಸುತ್ತದೆ ಎಂದು ಹೇಳಿದರು.
ನಮ್ಮ ಸಂವಿಧಾನ ಮತದಾರರ ಆಧಾರದ ಮೇಲೆ ಮೀಸಲಾತಿಗೆ ಅವಕಾಶವನ್ನು ನೀಡುವುದಿಲ್ಲ ಎಂದು ಅವರು ಉಲ್ಲೇಖಿಸಿದರು. ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿ ಧರ್ಮಾಧಾರಿತ ಮೀಸಲಾತಿಯನ್ನು ತಿರಸ್ಕರಿಸಿರುವುದನ್ನು ಚೌಟ ನೆನಪಿಸಿದರು.
ಸಿದ್ದರಾಮಯ್ಯ ಸರ್ಕಾರದ ಈ ನಿರ್ಧಾರ ಹಿಂದಕ್ಕೆ ಪಡೆಯುವವರೆಗೂ, ನಾವು ಸಂಸತ್ತಿನೊಳಗೂ ಹೊರಗೂ ಹೋರಾಟ ಮುಂದುವರಿಸುತ್ತೇವೆ ಎಂದು ಸಂಸದ ಚೌಟ ಒತ್ತಿ ಹೇಳಿದರು.