ದೆಹಲಿ: ಕರ್ನಾಟಕದ ಇತಿಹಾಸದಲ್ಲೇ ದೊಡ್ಡ ಪ್ರಮಾಣದ, 75 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯ ಪತ್ತೆ ಮಾಡಿ, ಇಬ್ಬರು ವಿದೇಶಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿರುವ ಮಂಗಳೂರು ನಗರ ಪೊಲೀಸರ ಕಾರ್ಯಾಚರಣೆಗೆ ಸಂಸದ ಕ್ಯಾ. ಚೌಟ ಅವರು ಪ್ರಶಂಸನೆ ಸಲ್ಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಂಸದ ಕ್ಯಾ. ಚೌಟ, ಅವರು ನಾನು ಸಂಸದನಾದ, ಕಳೆದ ವರ್ಷದ ಮೊದಲ ಅಧಿವೇಶನದಲ್ಲೇ ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದ ಸಮಸ್ಯೆಯನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದೆ ಹಾಗೂ ಅದರ ನಿರ್ಮೂಲನೆಗಾಗಿ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದೆ.
ಈಗ, ಮಂಗಳೂರು ಪೊಲೀಸರು ಭೇದಿಸಿರುವ ಈ ಡ್ರಗ್ಸ್ ಜಾಲದ ವ್ಯಾಪಕತೆಯನ್ನು ನೋಡಿದರೆ, ಈ ಡ್ರಗ್ ಮಾಫಿಯಾ ವ್ಯಾಪಕವಾಗಿ ಎಷ್ಟರಮಟ್ಟಿಗೆ ಹರಡಿದೆ ಎಂದು ಹೇಗೆ ಕಾರ್ಯಾಚರಿಸುತ್ತಿದೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿದೆ ಎಂದರು.
ವಿದೇಶಿ ಡ್ರಗ್ಸ್ ಮಾಫಿಯಾದ ಬೆನ್ನು ಹತ್ತಿದ ಮಂಗಳೂರು ಪೊಲೀಸರು ಇಬ್ಬರು ಪ್ರಮುಖ ಕಿಂಗ್‌ಪಿನ್‌ಗಳನ್ನು ಬಂಧಿಸಿರುವುದು ನಿಜಕ್ಕೂ ಪ್ರಶಂಸನೀಯ ಸಾಧನೆ. ಈ ಹಿನ್ನಲೆಯಲ್ಲಿ, ಮಂಗಳೂರು ಸಿಸಿಬಿ ಪೊಲೀಸರು ಬೃಹತ್ ಪ್ರಮಾಣದ ಡ್ರಗ್ಸ್ ಜಾಲವನ್ನು ಭೇದಿಸಿರುವ ಈ ಕಾರ್ಯಾಚರಣೆಯು ಅತ್ಯಂತ ಶ್ಲಾಘನೀಯವಾದುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರಕರಣದಿಂದ ಕರ್ನಾಟಕದಲ್ಲಿ ಡ್ರಗ್ಸ್ ಮಾಫಿಯಾದ ಹಿಂದೆ ಇರುವ ದೊಡ್ಡ ಕೈಗಳು ವಿದೇಶಿ ಪೆಡ್ಲರ್‌ಗಳದ್ದು ಎಂದು ಸ್ಪಷ್ಟವಾಗಿದೆ. . ಹೀಗಾಗಿ, ಈ ಜಾಲವನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಕೇಂದ್ರ ಗೃಹ ಇಲಾಖೆ ಹಾಗೂ ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳ ಸಹಾಯವೂ ಅತೀ ಅವಶ್ಯಕ. ಈ ಹಿನ್ನೆಲೆಯಲ್ಲಿ, ಸಂಸದನ ಸ್ಥಾನದಲ್ಲಿ ಇರುವ ನಾನು ಈ ವಿಚಾರವನ್ನು ರಾಜ್ಯ ಸರ್ಕಾರ, ಕೇಂದ್ರ ಗೃಹ ಇಲಾಖೆ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋಗೆ ಮನನೆ ಮಾಡಿಸಿ, ಸ್ಥಳೀಯ ಹಾಗೂ ವಿದೇಶಿ ಡ್ರಗ್ಸ್ ಹಗರಣದ ವಿರುದ್ಧ ಸಮಗ್ರ ತನಿಖೆ ನಡೆಸಲು ಎಲ್ಲಾ ಹಂತಗಳಲ್ಲಿ ಪ್ರಯತ್ನಿಸುತ್ತೇನೆ " ಎಂದು ಕ್ಯಾ. ಚೌಟ ಅವರು ತಿಳಿಸಿದರು.
ರಾಜ್ಯ ಸರ್ಕಾರದ ತನಿಖಾ ಸಂಸ್ಥೆಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಇದರ ಹಿಂದೆ ಅಡಗಿರುವ ದೊಡ್ಡ ಮಾಫಿಯಾ ಜಾಲವನ್ನು ಬಹಿರಂಗ ಪಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪೊಲೀಸ್ ಇಲಾಖೆಯಿಂದ ಇಂತಹ ಕಾರ್ಯಾಚರಣೆಗಳು ನಿರಂತರವಾಗಿ ನಡೆಯಬೇಕು. ಅದಲ್ಲದೇ ಯುವ ಜನತೆಯನ್ನು ಮಾದಕ ದ್ರವ್ಯದ ದಾಸತನದಿಂದ ರಕ್ಷಿಸಲು ಸಾರ್ವಜನಿಕರ ಸಹಕಾರವೂ ಅತೀ ಆಗತ್ಯ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳ ಪೋಷಕರು, ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳೊಂದಿಗೆ ಕೈಜೋಡಿಸಿ, ಮಾದಕ ವಸ್ತುಗಳ ವಿರುದ್ಧ ಬೃಹತ್ ಜನಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.