ಮಧ್ಯಪ್ರದೇಶ: ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ಒಂದನ್ನ ಪ್ರಕಟಿಸಿದೆ. ಅದೇನೆಂದರೆ ಅನುದಾನಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಯು ಸರ್ಕಾರದ ಅನುಮತಿಯಿಲ್ಲದೆ ಶಿಕ್ಷಕರನ್ನು ಕೆಲಸದಿಂದ ತೆಗೆದುಹಾಕಲು ಸಾಧ್ಯವಿಲ್ಲ ಎಂದು ಸ್ಪಷ್ಟೀಕರಿಸಿದೆ.
ಈ ತೀರ್ಪಿನ ಮೂಲಕ ಮಹೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ. ಈ ಪ್ರಕರಣವು ಜೀವಶಾಸ್ತ್ರ ಶಿಕ್ಷಕ ಎಸ್.ಕೆ. ವ್ಯಾಸ್ ಅವರದ್ದಾಗಿದ್ದು 1974ರಲ್ಲಿ ಅವರು ಹಿರಿಯ ತರಗತಿ ಶಿಕ್ಷಕರಾಗಿ ನೇಮಕಗೊಂಡಿದ್ದರು. 1991ರಲ್ಲಿ ಸರ್ಕಾರದ ನಿಯಮದಂತೆ ಉಪನ್ಯಾಸಕರ ಹುದ್ದೆಗೆ ಬಡ್ತಿ ಪಡೆದಿದ್ದರು.
2005ರಲ್ಲಿ, ಶಾಲೆಯಲ್ಲಿ 11 ಮತ್ತು 12ನೇ ತರಗತಿಗಳಿಗೆ ಜೀವಶಾಸ್ತ್ರ ವಿಭಾಗದಲ್ಲಿ ಪ್ರವೇಶವಿಲ್ಲ ಎಂಬ ಕಾರಣವನ್ನು ಕೊಟ್ಟು ಶಾಲೆಯ ಆಡಳಿತ ಮಂಡಳಿಯು ವ್ಯಾಸ್ ಅವರನ್ನು ಹಠಾತ್ ವಜಾಗೊಳಿಸಿತು.
ಈ ನಿರ್ಧಾರದ ವಿರುದ್ಧ ವ್ಯಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. 2007ರಲ್ಲಿ ನ್ಯಾಯಾಲಯ ಅವರನ್ನು ಮರುಸ್ಥಾಪಿಸಲು ಆದೇಶ ನೀಡಿತು. ಆದರೆ, ಈ ತೀರ್ಪನ್ನು ಶಾಲಾ ಆಡಳಿತ ಮಂಡಳಿ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿಯನ್ನು ಸಲ್ಲಿಸಿತು.
ನ್ಯಾಯಮೂರ್ತಿ ವಿವೇಕ್ ರುಶಿಯಾ ಮತ್ತು ನ್ಯಾಯಮೂರ್ತಿ ಗಜೇಂದ್ರ ಸಿಂಗ್ ಅವರಿದ್ದ ವಿಭಾಗೀಯ ಪೀಠ ಶಾಲೆಯ ಮೇಲ್ಮನವಿಯನ್ನು ವಜಾಗೊಳಿಸಿ, ಶಾಲೆಯ ನಿರ್ಧಾರ ತಪ್ಪು ಎಂಬುದಾಗಿ ಘೋಷಿಸಿದೆ. ಇದೀಗ ಸರ್ಕಾರದಿಂದ ಅನುಮತಿ ಪಡೆಯದೆ ಅನುದಾನಿತ ಶಾಲೆಗಳ ಆಡಳಿತ ಮಂಡಳಿಗೆ ಶಿಕ್ಷಕರನ್ನು ಕೆಲಸದಿಂದ ತೆಗೆದುಹಾಕಲು ಸಾಧ್ಯವಿಲ್ಲ ಎಂಬುದನ್ನು ಹೈಕೋರ್ಟ್ ಇನ್ನೊಮ್ಮೆ ಸ್ಪಷ್ಟನೆಯನ್ನು ನೀಡಿದೆ.