ಬೆಂಗಳೂರು: ಕರ್ನಾಟಕ ಸರ್ಕಾರ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ನೀಡುವ ಮಸೂದೆ ಅಂಗೀಕರಿಸಿದ್ದು, ಇದನ್ನು ಸಂವಿಧಾನ ವಿರುದ್ಧ ಕಾನೂನು ಎಂದು ಬಿಜೆಪಿ ವಿರೋಧಿಸಿದೆ. , ಈ ಮಸೂದೆ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಗಳ ವಿರುದ್ಧವಾಗಿದೆ ಮತ್ತು ಧರ್ಮಾಧಾರಿತ ಮೀಸಲಾತಿಗೆ ಅವರೇ ವಿರೋಧ ವ್ಯಕ್ತಪಡಿಸಿದ್ದನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನೆನಪಿಸಿದರು.
ಈ ಮಸೂದೆಯನ್ನು ವಿರೋಧಿಸಿದ 18 ಮಂದಿ ಬಿಜೆಪಿ ಶಾಸಕರನ್ನು ವಿಧಾನಸಭೆಯಿಂದ ಅಮಾನತುಗೊಳಿಸಿರುವ ಸ್ಪೀಕರ್ ಕ್ರಮವನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.
ಸಂವಿಧಾನ ಮತ್ತು ಅಂಬೇಡ್ಕರ್ ಅವರ ಮೌಲ್ಯಗಳನ್ನು ಲಂಗಿಸುತ್ತಿರುವ ಕಾಂಗ್ರೆಸ್ ಸರ್ಕಾರವು, ಒಂದು ಸಮುದಾಯದ ಓಲೈಕೆಗಾಗಿ ಹಿಂದುಳಿದ ವರ್ಗಗಳ ಹಕ್ಕುಗಳನ್ನು ಹಿಂಪಡಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ಈ ಮೀಸಲಾತಿ ನಡವಳಿಕೆ ಸಮಾಜವನ್ನು ವಿಭಜಿಸುವ ಕಾರ್ಯವಾಗಿದ್ದು, ಚುನಾವಣಾ ಲಾಭಕ್ಕಾಗಿ ಮಾತ್ರ ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಬಿಜೆಪಿ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಹಾಗೂ ಎಲ್ಲ ಹಂತಗಳಲ್ಲಿ ಹೋರಾಟ ನಡೆಸಲು ಸಿದ್ಧವಾಗಿದೆ ಎಂದು ಚೌಟ ಅವರು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ಈ ತೀರ್ಮಾನವನ್ನು ಪ್ರತಿಭಟಿಸಿರುವ ಬಿಜೆಪಿ ಶಾಸಕರನ್ನು ಸದನದಿಂದ ಅಮಾನತುಗೊಳಿಸಿರುವ ಈ ಕ್ರಮ ಸ್ಪೀಕರ್ ಅವರ ಪಕ್ಷಪಾತಿ ಧೋರಣೆಯನ್ನು ಸೂಚಿಸುತ್ತದೆ. ಹಿಂದೆ ಕಾಂಗ್ರೆಸ್ ಶಾಸಕರು ಕಲಾಪದ ವೇಳೆಯಲ್ಲಿ ಅನಾದರಣೀಯ ವರ್ತನೆ ತೋರಿದ್ದರೂ ಅವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಲಾಗಿರಲಿಲ್ಲ ಎಂದೂ ಸದನದಲ್ಲಿ ಘೋಷಣೆ ಕೂಗಿ ಅಂಬೇಡ್ಕರ್ ತತ್ವಗಳಿಗೆ ವಿರುದ್ಧವಾದ ಮಸೂದೆಯನ್ನು ವಿರೋಧಿಸಿದ್ದಕ್ಕೆ 18 ಶಾಸಕರ ಅಮಾನತು ಅನ್ಯಾಯಕರವಾಗಿ ಹೇರುವುದಾಗಿ ಚೌಟ ಆರೋಪಿಸಿದ್ದಾರೆ.
ಬಿಜೆಪಿ ಈ ವಿಷಯವನ್ನು ರಾಜ್ಯಾದ್ಯಂತ ದೊಡ್ಡ ಹೋರಾಟ ಮಾಡುವುದಕ್ಕೆ ಸಿದ್ಧವಾಗಿದ್ದು, ಈ ಮೀಸಲಾತಿ ರದ್ದು ಮಾಡಿಸಲು ಎಲ್ಲಾ ರೀತಿಯ ಕಾನೂನು ಹಾದಿಗಳನ್ನು ಅನ್ವೇಷಿಸಲಾಗುವುದು. ಕಾಂಗ್ರೆಸ್ ಸರ್ಕಾರದ ವಿಭಜನಾ ನೀತಿಗಳನ್ನು ಜನತೆ ತಿರಸ್ಕರಿಸಬೇಕಿದೆ ಅದರ ವಿರುದ್ದ ಹೋರಾಡಬೇಕಿದೆಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೋರಿದ್ದಾರೆ.