ಬೆಂಗಳೂರು: ಕರ್ನಾಟಕ ಕೇಡರ್‌ನ ಹಿರಿಯ ಐಎಎಸ್ ಅಧಿಕಾರಿಯಾಗಿರುವ ಅಜಯ್ ಸೇಠ್ ಅವರಿಗೆ ಕೇಂದ್ರ ಸರ್ಕಾರದ ಉನ್ನತ ಹುದ್ದೆ ಲಭಿಸಿದೆ. ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿಯಾಗಿ ಮತ್ತೂ ಕಂದಾಯ ಕಾರ್ಯದರ್ಶಿಯಾಗಿ ಅವರು ನೇಮಕಗೊಂಡಿದ್ದಾರೆ. ಈ ಹಿಂದೆ ಅವರು 2021ರಿಂದ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಇದಕ್ಕೂ ಮುನ್ನ , ಈ ಹುದ್ದೆಯಲ್ಲಿ ತುಹಿನ್ ಕಾಂತ್ ಪಾಂಡೆ ಕಾರ್ಯನಿರ್ವಹಿಸುತ್ತಿದ್ದರು. ಅವರು ಸೆಬಿ (SEBI) ಅಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಅಜಯ್ ಸೇಠ್ ಅವರನ್ನು ಅವರ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ.
1987ರ ಬ್ಯಾಚ್‌ನ ಐಎಎಸ್ ಅಧಿಕಾರಿ ಆಗಿರುವ ಅಜಯ್ ಸೇಠ್, 2018ರಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮದ (BMRCL) ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅವರ ನಾಯಕತ್ವದಲ್ಲಿ ಮೆಟ್ರೊ ಕಾಮಗಾರಿ ವೇಗ ಪಡೆದುಕೊಂಡಿತ್ತು.
2021ರಲ್ಲಿ ಕೇಂದ್ರ ಸೇವೆಗೆ ಜೋಡಿಸಿಕೊಂಡ ಅವರು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದರು. ಹಣಕಾಸು ಹಾಗೂ ಕಂದಾಯ ವ್ಯವಸ್ಥೆಯ ನಿರ್ವಹಣೆಯಲ್ಲಿ ಅನುಭವ ಹೊಂದಿದ ಅಜಯ್ ಸೇಠ್, ಈಗ ಪ್ರಮುಖ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಮುಂದಾಗಿದ್ದಾರೆ.