ಬಂಟ್ವಾಳ: ಪೊಳಲಿಗೆ 5ನೇ ವರ್ಷದ ಪಾದಯಾತ್ರೆ: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಬಂಟ್ವಾಳ ಪ್ರಖಂಡದ ನೇತೃತ್ವದಲ್ಲಿ, ಏಕಕಾಲದಲ್ಲಿ ಮೂರು ದ್ವಾರಗಳಿಂದ ಭಕ್ತಿಪೂರ್ಣ ಪ್ರಯಾಣ!

  • 26 Mar 2025 09:17:45 AM

ಬಂಟ್ವಾಳ : ಬಂಟ್ವಾಳ ಪ್ರಖಂಡ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳದ ನೇತೃತ್ವದಲ್ಲಿ ಅಮ್ಮನೆಡೆಗೆ ನಮ್ಮ ನಡಿಗೆ – ಪೊಳಲಿಗೆ 5ನೇ ವರ್ಷದ ಪಾದಯಾತ್ರೆ ನಡೆಯಲಿದೆ. ಈ ಪಾದಯಾತ್ರೆಯು ಲೋಕಕಲ್ಯಾಣಕ್ಕಾಗಿ ಹಾಗೂ ಪೊಳಲಿ ಕ್ಷೇತ್ರದಲ್ಲಿ ವಸ್ತ್ರ ಸಂಹಿತೆ ಕ್ರಮಬದ್ದವಾಗಿ ಜಾರಿಗೊಳಿಸುವ ಬೇಡಿಕೆಯೊಂದಿಗೆ ಮತ್ತು ಶ್ರೀ ಕ್ಷೇತ್ರದ ವತಿಯಿಂದ ಗೋಶಾಲೆ ನಿರ್ಮಾಣ, ಹಿಂದೂ ಸಮಾಜಕ್ಕೆ ಧಾರ್ಮಿಕ ಶಿಕ್ಷಣದ ಅಗತ್ಯತೆ ಹೊಂದಿದ ಕಾರಣ ಬಾಲ ಸಂಸ್ಕಾರ ಕೇಂದ್ರ ಸ್ಥಾಪನೆ, ಬಡ ಹಿಂದೂ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಸಾಮೂಹಿಕ ಮದುವೆ ಕಾರ್ಯಕ್ರಮ ಆಯೋಜನೆ ಮೊದಲಾದ ಬೇಡಿಕೆಗಳೊಂದಿಗೆ ಈ ಪಾದಯಾತ್ರೆ ಆಯೋಜಿಸಲಾಗಿದೆ.

 

ಅದಲ್ಲದೇ ಪೋಳಲಿ ಜಾತ್ರಾ ಸಮಯದಲ್ಲಿ ಪವಿತ್ರ ಗೋವುಗಳ ಹತ್ಯೆ ಹಾಗೂ ಭಕ್ಷಣ ಮಾಡುವ ಅನ್ಯಮತೀಯರಿಗೆ ಯಾವುದೇ ವ್ಯಾಪಾರ-ವ್ಯವಹಾರದಲ್ಲಿ ಅವಕಾಶ ನೀಡಬಾರದು ಎಂಬ ಮನವಿಯೊಂದಿಗೆ, ಈ ಪಾದಯಾತ್ರೆ ದೇವಾಲಯದ ಪರಿಪೂರ್ಣ ಆಸ್ಥೆಯನ್ನು ಸಮರ್ಥಿಸುವ ಉದ್ದೇಶದಿಂದ ದಿನಾಂಕ 06-04-2025, ಆದಿತ್ಯವಾರ ಬೆಳಗ್ಗೆ 5.30ಕ್ಕೆ ಬಿ.ಸಿ.ರೋಡು ಕೈಕಂಬ ದ್ವಾರ, ಕಡೆಗೋಳಿ ದ್ವಾರ, ಹಾಗೂ ಗುರುಪುರ ಕೈಕಂಬ ದ್ವಾರಗಳಿಂದ ಭಾರತ ಮಾತೆಗೆ ಪುಷ್ಪಾರ್ಚನೆ ನಡೆಸಿ ಏಕಕಾಲದಲ್ಲಿ ಪಾದಯಾತ್ರೆ ಪ್ರಾರಂಭಗೊಳ್ಳಲಿದೆ.

 

ಈ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕಾಗಿ ಆಯೋಜಕರು ವಿನಂತಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ಪ್ರಖಂಡದ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಹಾಗೂ ವಕೀಲರಾದ ಶ್ರೀ ಪ್ರಸಾದ್ ಕುಮಾರ್ ರೈ ಮಾಹಿತಿ ನೀಡಿದ್ದು, ಭಕ್ತರು ಉತ್ಸಾಹದಿಂದ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೇಳಿಕೊಂಡಿದ್ದಾರೆ.