ಮಂಗಳೂರಿಗೆ ಭಾರತದ ಮೊದಲ ಕೋಸ್ಟ್‌ಗಾರ್ಡ್‌ ಅಕಾಡೆಮಿ ಯೋಜನೆ;ರಕ್ಷಣಾ ಕಾರ್ಯದರ್ಶಿಗಳ ಸಕಾರಾತ್ಮಕ ಸ್ಪಂದನೆ – ಕ್ಯಾ. ಚೌಟ

  • 26 Mar 2025 09:21:43 AM


ನವದೆಹಲಿ: ಮಂಗಳೂರಿನಲ್ಲಿ ದೇಶದ ಮೊದಲ ಕೋಸ್ಟ್‌ಗಾರ್ಡ್‌ ಅಕಾಡೆಮಿ ಸ್ಥಾಪನೆಗೆ ಸಂಬಂಧಿಸಿದ ಉಳಿದ ಒಪ್ಪಿಗೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದಕ್ಕೆ ಹೆಚ್ಚಿನ ಮುತುವರ್ಜಿ ವಹಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಇಂದು ರಕ್ಷಣಾ ಸಚಿವಾಲಯದ ಕಾರ್ಯದರ್ಶಿಯಾದ ರಾಜೇಶ್‌ ಕುಮಾರ್‌ ಸಿಂಗ್‌ ಅವರನ್ನು ಭೇಟಿ ಮಾಡಿದ್ದಾರೆ.

 

ನವದೆಹಲಿಯಲ್ಲಿ ಮಂಗಳವಾರ ರಾಜೇಶ್ ಕುಮಾರ್ ಸಿಂಗ್ ಅವರನ್ನು ಭೇಟಿಯಾದ ಕ್ಯಾ. ಚೌಟ ಅವರು ಮಂಗಳೂರಿನಲ್ಲಿ ಕೋಸ್ಟ್‌ಗಾರ್ಡ್‌ ಅಕಾಡೆಮಿಯ ಸ್ಥಾಪನೆಗೆ ತ್ವರಿತ ಆಡಳಿತಾತ್ಮಕ ಒಪ್ಪಿಗೆ ಕೊಡಬೇಕಾಗಿ ಮನವಿ ಮಾಡಿಕೊಂಡಿದ್ದಾರೆ. 

 

2017ರಲ್ಲಿ ಈ ಅಕಾಡೆಮಿಗಾಗಿ ಅನುಮೋದನೆ ದೊರೆತಿದ್ದು, ಕೆಂಜಾರಿನಲ್ಲಿ 159.03 ಎಕರೆ ಜಮೀನು ಈಗಾಗಲೇ ಮಂಜೂರಾಗಿದೆ ಹಾಗೂ ಭೂ ಹಸ್ತಾಂತರ ಪ್ರಕ್ರಿಯೆ ಸಹ ಪೂರ್ಣಗೊಂಡಿದೆ. ಅಕಾಡೆಮಿ ಸ್ಥಾಪನೆಗೆ ಅಗತ್ಯ ವಿಸ್ತೃತ ಯೋಜನಾ ವರದಿಯು ರಕ್ಷಣಾ ಸಚಿವಾಲಯಕ್ಕೆ ಸಲ್ಲಿಕೆಯಾಗಿದೆ. ಇದಕ್ಕೆ ಶೀಘ್ರ ಅನುಮೋದನೆ ನೀಡುವಂತೆ ಅವರು ವಿನಂತಿಸಿಕೊಂಡಿದ್ದಾರೆ.

 

₹1385 ಕೋಟಿ ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆಗೆ ಸಂಪುಟ ಸಮಿತಿಯ ಅಂತಿಮ ಒಪ್ಪಿಗೆಯಷ್ಟೇ ಉಳಿದಿರುವುದು. ಮಂಗಳೂರಿನಲ್ಲಿ ಈ ಅಕಾಡೆಮಿ ಸ್ಥಾಪನೆಯಾದರೆ ಕರ್ನಾಟಕ ಮಾತ್ರೆ ಇಡೀ ದೇಶದ ಕರಾವಳಿ ಭದ್ರತೆಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗಬಹುದು ಆದ್ದರಿಂದ ಸಂಪುಟ ಸಮಿತಿಯಿಂದ ತ್ವರಿತ ಅನುಮೋದನೆ ಪಡೆಯಲು ಹಾಗೂ ಯೋಜನೆಯನ್ನು ಶೀಘ್ರ ಕಾರ್ಯಗತಗೊಳಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಕ್ಯಾ. ಚೌಟ ಅವರು ರಾಜೇಶ್ ಕುಮಾರ್ ಸಿಂಗ್ ಅವರಲ್ಲಿ ಮನವಿ ಮಾಡಿದ್ದಾರೆ.

 

ಭೇಟಿಯ ಬಳಿಕ ಕ್ಯಾ. ಚೌಟ ಪ್ರತಿಕ್ರಿಯಿಸಿ, ರಕ್ಷಣಾ ಕಾರ್ಯದರ್ಶಿಗಳು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದೂ ಭಾರತದ ಮೊದಲ ಕೋಸ್ಟ್‌ಗಾರ್ಡ್‌ ಅಕಾಡೆಮಿ ಮಂಗಳೂರಿನಲ್ಲಿ ಸ್ಥಾಪನೆಯಾಗುತ್ತಿರುವುದು ಹೆಮ್ಮೆ ಸಾಧನೆಯಾಗಿದೆ. ಇದರಿಂದ ದೇಶದ ಯುವಜನರಿಗೆ ತರಬೇತಿ ಸಿಗಲಿದ್ದು, ಮೆರಿಟೈಮ್‌ ರಕ್ಷಣಾ ತರಬೇತಿಗೆ ವಿದೇಶ ಅವಲಂಬನೆಯ ಅಗತ್ಯ ಕಡಿಮೆಯಾಗಲಿದೆ. ಅದಲ್ಲದೆ, ಅರಬಿ ಸಮುದ್ರ ಭದ್ರತೆ ಹಾಗೂ ಕರಾವಳಿಯ ಆರ್ಥಿಕ ಅಭಿವೃದ್ಧಿಗೆ ಇದು ಸಹಾಯಕರವಾಗಲಿದೆ ಎಂದು ತಿಳಿಸಿದ್ದಾರೆ.