ವರದಕ್ಷಿಣೆ ಹಿಂಸೆ, ಕೊಲೆಗೆ ಯತ್ನ ಆರೋಪ: PSI ಪಿ. ಕಿಶೋರ್ ಮತ್ತು ಕುಟುಂಬದ ವಿರುದ್ಧ FIR ದಾಖಲು!

  • 26 Mar 2025 01:23:52 PM

ಧರ್ಮಸ್ಥಳ:  ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ನೀಡಿ ಕೊಲೆಗೆ ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್‌ಐ ಪಿ. ಕಿಶೋರ್ ಸೇರಿದಂತೆ ನಾಲ್ವರ ವಿರುದ್ಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಸೋಮವಾರ ರಾತ್ರಿ ಎಫ್‌ಐಆರ್ ದಾಖಲಾಗಿದೆ. 

 

ಈ ಬಗ್ಗೆ ನಾಗರಬಾವಿ ಟೀಚರ್ಸ್ ಕಾಲೋನಿಯ ಮಾನಸ ನಗರದ ನಿವಾಸಿ ಆರ್. ವರ್ಷಾ ಅವರು ದೂರು ನೀಡಿರುತ್ತಾರೆ. ಅದರ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಿಶೋರ್ ಅವರ ತಂದೆ ಪುಟ್ಟಚನ್ನಪ್ಪ, ತಾಯಿ ಸರಸ್ವತಮ್ಮ, ಸಹೋದರ ಪಿ. ಚಂದನ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಇವರೆಲ್ಲರೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ನಿವಾಸಿಗಳಾಗಿದ್ದಾರೆ.

 

ವರ್ಷಾ ಅವರ ದೂರಿನಲ್ಲಿ, ಮಧ್ಯವರ್ತಿಯೊಬ್ಬರು ಹುಡುಗನನ್ನು ಪರಿಚಯಿಸಿದ್ದು, 2 ಕುಟುಂಬಗಳು ಒಪ್ಪಿದ ನಂತರ ಮದುವೆಗೆ ಒಪ್ಪಿಗೆಯಾಗಿದ್ದು ಮಾತುಕತೆ ವೇಳೆ ಪುಟ್ಟಚನ್ನಮ್ಮ ಮತ್ತು ಕುಟುಂಬಸ್ಥರು ಮದುವೆ ಖರ್ಚಿಗೆ ₹25 ಲಕ್ಷ ಕೊಡಲು ಬೇಡಿಕೆ ಇಟ್ಟಿದ್ದರು ಎಂದು ತಿಳಿಸಿದ್ದಾರೆ. ಅಷ್ಟು ಹಣ ನೀಡಲು ಸಾಧ್ಯವಿಲ್ಲದ ಎಂದು ಹೇಳಿದ್ದರಿಂದ ₹10 ಲಕ್ಷ ಕೊಡಲು ಒಪ್ಪಿಕೊಂಡು 2023ರ ನವೆಂಬರ್ 24ರಂದು ನಿಶ್ಚಿತಾರ್ಥ ನಡೆಯಿತು. ಕಿಶೋರ್ ಅವರಿಗೆ 18 ಗ್ರಾಂ ಚಿನ್ನದ ಉಂಗುರ ಮತ್ತು ಕಾರು ನೀಡುವಂತೆ ಬೇಡಿಕೆ ಇಟ್ಟಿದ್ದರಿಂದ ರಾಜಾಜಿನಗರದ ಹುಂಡೈ ಶೋರೂಂನಿಂದ ₹23 ಲಕ್ಷ ಮೌಲ್ಯದ ಕಾರು ನೀಡಲಾಗಿತ್ತು.

 

 2024ರ ಫೆಬ್ರವರಿ 21ರಂದು ಮದುವೆ ನೆಡೆದಿದ್ದು, ಆ ಸಂದರ್ಭದಲ್ಲಿ ₹10 ಲಕ್ಷ ನಗದು, 135 ಗ್ರಾಂ ಚಿನ್ನಾಭರಣ, 850 ಗ್ರಾಂ ಚಿನ್ನಾಭರಣ (ವರ್ಷಾ), 3 ಕೆ.ಜಿ. ಬೆಳ್ಳಿ ಆಭರಣ ನೀಡಲಾಗಿತ್ತು. ಪೋಷಕರು ಮದುವೆಗೆಂದು ಸುಮಾರು ₹60 ಲಕ್ಷ ದಷ್ಟು ಖರ್ಚು ಮಾಡಿದ್ದರು.

 

ಮದುವೆಯಾದಾಗ ಕಿಶೋರ್ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ಈ ಠಾಣೆಯಲ್ಲಿ ಯಾವುದೇ ಆದಾಯವಿಲ್ಲದ್ದರಿಂದ ಬೇರೆ ಠಾಣೆಗೆ ವರ್ಗಾವಣೆಯಾಗಬೇಕು ಎಂದು ಅವರು ಪೀಡಿಸಿದರು. ಮೇಲಾಧಿಕಾರಿಗಳಿಗೆ ಲಂಚ ಕೊಡಬೇಕಾದ ಕಾರಣ, ವರ್ಷಾ ಅವರ ತಂದೆಯಿಂದ ₹10 ಲಕ್ಷ ತರುವಂತೆ ಕಿಶೋರ್ ಒತ್ತಾಯಿಸಿದರು. ಮದುವೆಗೆಂದು ₹1 ಕೋಟಿ ಖರ್ಚಾಗಿದೆ ಆದ್ದರಿಂದ ಮತ್ತೆ ಹಣ ನೀಡುವುದು ಕಷ್ಟ ಎಂದು ವರ್ಷಾ ತಿಳಿಸಿದಾಗ, ಕಿಶೋರ್ ಗನ್ ತೆಗೆದು ಗುಂಡಿಕ್ಕಲು ಮುಂದಾದರು. 

 

ಧರ್ಮಸ್ಥಳಕ್ಕೆ ವರ್ಗಾವಣೆಯಾದ ಬಳಿಕ, ಪೀಠೋಪಕರಣ ಖರೀದಿಗೆ ₹2 ಲಕ್ಷ ತರುವಂತೆ ಸೂಚಿಸಿದರು. ಈ ಬೇಡಿಕೆಯನ್ನು ವರ್ಷಾ ತಿರಸ್ಕರಿಸಿದಾಗ, ಪ್ರತಿದಿನವೂ ವರದಕ್ಷಿಣೆ ವಿಚಾರವಾಗಿ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

 

ಇದೇ ಮಾರ್ಚ್ 21ರಂದು ಕಿಶೋರ್ ರಾತ್ರಿ 9ರಿಂದ ಮಧ್ಯರಾತ್ರಿ 1 ಗಂಟೆಯವರೆಗೆ ಬೈಯ್ದು, ಪೊಲೀಸ್ ಬೆಲ್ಟ್ ಬಳಸಿ ಹಲ್ಲೆ ನಡೆಸಿದ್ದಾರೆಂದೂ ಲಟ್ಟಣಿಗೆ (ವಸ್ತು) ಬಳಸಿ ಹಲ್ಲೆ ಮಾಡಿದುದರಿಂದ ಗಾಯಗೊಂಡ ವರ್ಷಾ ತಮ್ಮ ಪೋಷಕರೊಂದಿಗೆ ಬೆಂಗಳೂರಿಗೆ ಬಂದು ಕೆ.ಸಿ. ಜನರಲ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ ಎಂದು ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ, ಕಿಶೋರ್ ಮತ್ತು ಅವರ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.