ಬಂಟ್ವಾಳ: ಬಾಳ್ತಿಲ ಗ್ರಾಮ ಪಂಚಾಯತಿನ ನೂತನ ಅಧ್ಯಕ್ಷರಾಗಿ ಚಂದ್ರಶೇಖರ್ ಚೆಂಡೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಅಣ್ಣು ಪೂಜಾರಿಯವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದ್ದರಿಂದ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆಸಲಾಯಿತು.
ಚುನಾವಣಾಧಿಕಾರಿಯಾಗಿ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಅವರು ಕಾರ್ಯನಿರ್ವಹಿಸಿದರು. ಚುನಾವಣೆಯಲ್ಲಿ ಹಿಂದುಳಿದ ವರ್ಗ ‘ಎ’ ಮೀಸಲಾತಿಯಂತೆ ಚಂದ್ರಶೇಖರ್ ಸರ್ವಾನುಮತದಿಂದ ನಾಮಪತ್ರ ಸಲ್ಲಿಸಿ, ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷೆಯಾಗಿ ಶ್ರೀಮತಿ ರಂಜಿನಿ ಮುಂದುವರಿಯಲಿದ್ದಾರೆ.
ಚುನಾವಣಾಧಿಕಾರಿಯಾದ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಆಯ್ಕೆಯನ್ನು ಘೋಷಿಸಿ, ನೂತನ ಅಧ್ಯಕ್ಷರಿಗೆ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬಾಳ್ತಿಲ ಗ್ರಾಮ ಪಂಚಾಯತ್‌ನ 16 ಬಿಜೆಪಿ ಬೆಂಬಲಿತ ಸದಸ್ಯರು, ಪ್ರಮುಖರಾದ ಲೋಕಾನಂದ ಏಳ್ತಿಮಾರ್, ಸುರೇಶ್ ಶೆಟ್ಟಿ ಕಾಂದಿಲ, ರಾಮಣ್ಣ ಶೆಟ್ಟಿ, ಜಯಾನಂದ ಆಚಾರ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದು, ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.