ಬಸನಗೌಡ ಯತ್ನಾಳ್‌ಗೆ ಬಿಜೆಪಿ ಬಾಗಿಲು ಮುಚ್ಚಿದ ಹೈಕಮಾಂಡ್!– 6 ವರ್ಷಗಳ ನಿಷೇಧ!;ಮುಂದೇನಾಗಬಹುದು?

  • 27 Mar 2025 09:09:57 AM

ನವದೆಹಲಿ: ವಿಜಯಪುರದ ಬಿಜೆಪಿ ಶಾಸಕರಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದ ಶಿಸ್ತು ಉಲ್ಲಂಘನೆಯ ಕಾರಣದಿಂದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿದೆ.

 

 ರಾಜ್ಯಾಧ್ಯಕ್ಷರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದು ಮತ್ತು ಪಕ್ಷದ ನಿಯಮ ಪಾಲಿಸದೆ ಇರುವುದು ಎನ್ನುವಂತಹದ್ದು ಪ್ರಮುಖ ಕಾರಣಗಳಾಗಿವೆ. ಹೀಗಾಗಿ, ಬಿಜೆಪಿಯ ಹೈಕಮಾಂಡ್ ಅವರು ಮುಂದಿನ ಆರು ವರ್ಷಗಳ ಕಾಲ ಪಕ್ಷದಿಂದ ದೂರವಾಗುವಂತೆ ಆದೇಶ ಹೊರಡಿಸಿದೆ.

 

ಯತ್ನಾಳ್ ಅವರು ಪಕ್ಷದ ಶಿಸ್ತು ನಿರಂತರವಾಗಿ ಪಾಲಿಸದೆ ಹಂಗಾಮೆ ಸೃಷ್ಟಿಸಿದ್ದರಿಂದ, ಫೆಬ್ರವರಿ 10ರಂದು ಅವರಿಗೆ ಶೋಕಾಸ್ ನೋಟಿಸ್ ಜಾರಿಯಾಗಿತ್ತು. ಈ ನೋಟಿಸ್‌ಗೆ ಅವರು ಪ್ರತಿಕ್ರಿಯಿಸಿದ್ದರು. ಆದರೂ ಅವರ ಪ್ರತಿಕ್ರಿಯೆಗೆ ಬಿಜೆಪಿ ಹೈಕಮಾಂಡ್‌ಗೆ ತೃಪ್ತಿಕರವೇನಿಸದೆ ಇರುವುದರಿಂದ , ಪಕ್ಷದ ಕೇಂದ್ರ ಶಿಸ್ತು ಸಮಿತಿಯು ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರ ಉಚ್ಛಾಟನೆಯ ನಿರ್ಧಾರ ಕೈಗೊಂಡಿದೆ.

 

ಇದೀಗ, ಯತ್ನಾಳ್ ಅವರ ಶಾಸಕರ ಸ್ಥಾನಕ್ಕೆ ಏನು ಆಗಬಹುದು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಚರ್ಚೆಯಾಗಿದೆ. ಅವರು ಪಕ್ಷದಿಂದ ಹೊರಗುಳಿದರೂ, ಸ್ವತಂತ್ರ ಶಾಸಕರಾಗಿ ಮುಂದುವರಿಯಬಹುದು. ಆದರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಪುನಃ ಚುನಾವಣೆ ನಡೆಯಬೇಕಾಗುತ್ತದೆ.

 

ಈ ಕುರಿತು ಬಿಜೆಪಿ ಕೇಂದ್ರ ಶಿಸ್ತು ಸಮಿತಿಯ ಕಾರ್ಯದರ್ಶಿ ಓಂ ಪಾಠಕ್ ಅವರು ಪ್ರಕಟಣೆ ನೀಡಿದ್ದು, ಯತ್ನಾಳ್ ಅವರ ಈ ವರ್ತನೆಯ ವಿರುದ್ಧ ಇಂತಹ ಗಂಭೀರ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು ಎಂದು ತಿಳಿಸಿದ್ದಾರೆ.