ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆಯ ಪ್ರಕಾರ, ಶಿಕ್ಷಣ, ಕಲೆ, ಸಾಹಿತ್ಯ, ವಿಜ್ಞಾನ ಅಥವಾ ಯಾವುದೇ ಬೌದ್ಧಿಕ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಮಾತ್ರ ಗೌರವ ಡಾಕ್ಟರೇಟ್ ಪ್ರದಾನ ಮಾಡಬೇಕು ಎಂಬುದು ಗೌರವನೀಯ ಪದ್ಧತಿಯಾಗಿರುತ್ತದೆ.
ಆದರೆ ಇತ್ತೀಚಿನ ವರುಷಗಳಲ್ಲಿ ವಿವಿ ಈ ಮಾನದಂಡಗಳನ್ನು ಕಡೆಗಣಿಸಿ ಉದ್ದಿಮೆದಾರರು, ವ್ಯಾಪಾರಸ್ಥರು ಹಾಗೂ ಪ್ರಭಾವಿ ವ್ಯಕ್ತಿಗಳಿಗೆ ಈ ಗೌರವ ಪದವಿಯನ್ನು ನೀಡುತಿದ್ದು ವಿಶ್ವಾಸಾರ್ಹತೆಗೆ ದಕ್ಕೆಯನ್ನುಂಟುಮಾಡಿದೆ. ಈ ಪ್ರಕ್ರಿಯೆ ವಿವಿಗೆ ಅಪಕೀರ್ತಿ ಉಂಟುಮಾಡುವುದು ಅಲ್ಲದೆ, ಗೌರವ ಡಾಕ್ಟರೇಟ್ ಪದವಿಯ ಮಹತ್ವವನ್ನೂ ಕುಗ್ಗಿಸುತ್ತಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮಂಗಳೂರು ವಿಭಾಗವು ಈ ಅನೌಚಿತ್ಯವನ್ನು ಪ್ರಕ್ರಿಯೆಯನ್ನು ತೀವ್ರವಾಗಿ ಖಂಡಿಸುತ್ತಿದೆ.
ಈ ಬಾರಿಯ ಘಟಿಕೋತ್ಸವದಲ್ಲಿ ಯಾವುದೇ ಪ್ರಭಾವ, ಹಣಕಾಸು ಆಮಿಷ, ರಾಜಕೀಯ ಒತ್ತಡ ಅಥವಾ ಕಮಿಷನ್ ಏಜೆಂಟ್‌ಗಳ ತಂತ್ರಗಾರಿಕೆಗಳಿಗೆ ಬಲಿಯಾಗದೆ, ಶುದ್ಧ ಬೌದ್ಧಿಕ, ಶೈಕ್ಷಣಿಕ, ಸಾಹಿತ್ಯ ಹಾಗೂ ಕಲಾ ಸಾಧನೆಗಳನ್ನು ಆಧಾರವಾಗಿರಿಸಿಕೊಂಡು ಗೌರವ ಡಾಕ್ಟರೇಟ್ ಪ್ರದಾನ ಮಾಡಬೇಕು ಎಂಬುದಾಗಿ ಎಬಿವಿಪಿ ಒತ್ತಾಯಿಸುತ್ತದೆ.
ಅನ್ಯಾಯವಾಗಿ ಪದವಿ ನೀಡುವುದಕ್ಕಿಂತ ನೀಡದೆ ಇರುವುದೇ ಶ್ರೇಯಸ್ಸು ಎಂಬುದಾಗಿಯೂ ಶ್ರೇಷ್ಠ ವ್ಯಕ್ತಿಗಳಿಗೆ ಮಾತ್ರ ಅದನ್ನು ನೀಡುವುದು ಅಥವಾ ಯಾರಿಗೂ ಕೊಡದೆ ಇದ್ದರೇ ವಿವಿಯ ಗೌರವವನ್ನು ಕಾಪಾಡುವುದು ಎಂದು ಎಬಿವಿಪಿ ಎಚ್ಚರಿಸಿದೆ.
ಈ ಸಂಬಂಧವಾಗಿ ವಿಶ್ವವಿದ್ಯಾಲಯದ ಉಪಕುಲಪತಿ ಹಾಗೂ ಸಿಂಡಿಕೇಟ್ ಸದಸ್ಯ ಮಂಡಳಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದು ಎಬಿವಿಪಿ ಮಂಗಳೂರು ಜಿಲ್ಲಾ ಸಂಚಾಲಕ ಸುವಿತ್ ಶೆಟ್ಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.