ನವದೆಹಲಿ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಸುರಕ್ಷತೆ ಹಾಗೂ ಅಭಿವೃದ್ಧಿಗೆ ಹೆಚ್ಚುವರಿ ಭೂಸ್ವಾಧೀನದ ಅವಶ್ಯಕತೆ ಇದ್ದು ಇದಕ್ಕಾಗಿ ಎದುರಾಗುತ್ತಿರುವ ಅಡೆತಡೆಗಳನ್ನು ನಿವಾರಿಸಲು ವಿಮಾನಯಾನ ಸಚಿವಾಲಯ ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಸಂಸತ್ತಿನಲ್ಲಿ ಒತ್ತಾಯಿಸಿದ್ದಾರೆ.
ಲೋಕಸಭೆಯ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ಮಂಗಳೂರು ಏರ್‌ಪೋರ್ಟ್ ನಿರ್ವಹಣೆಯನ್ನು ಖಾಸಗಿ ಸಂಸ್ಥೆಯು ನೋಡಿಕೊಳ್ಳುತ್ತಿರುವುದರಿಂದ, ರನ್‌ವೇ ಸುರಕ್ಷತೆಗಾಗಿ ಹೆಚ್ಚುವರಿ ಭೂಮಿಯ ಅಗತ್ಯವಿದೆ ಎಂದು ಜಿಲ್ಲಾಡಳಿತವನ್ನು ಕೇಳಿಕೊಂಡಿದೆ.
ಅದರಂತೆ ರಾಜ್ಯ ಸರ್ಕಾರ ಮೂಲಕ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(AAI)ಕ್ಕೂ ಪತ್ರ ಬರೆದ್ದು, ಆ ಮೂಲಕ ಭೂಸ್ವಾಧೀನ ಪ್ರಕ್ರಿಯೆಯನ್ನು ಮಾಡುವುದಕ್ಕೂ ಸಿದ್ಧವಿರುವುದಾಗಿ ಹೇಳಿಕೊಂಡಿದೆ.
ಕ್ಯಾ. ಚೌಟ ಅವರು ಈ ಕುರಿತು ಖುದ್ದು ವಿಮಾನಯಾನ ಸಚಿವಾಲಯದ ಕಾರ್ಯದರ್ಶಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿದ್ದು, ಅವರು ಸಹ ಭೂಸ್ವಾಧೀನಕ್ಕೆ ತಮ್ಮ ಒಪ್ಪಿಗೆ ಸೂಚಿಸಿರುತ್ತಾರೆ. ಆದರೆ ಈ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಪ್ರಗತಿ ಕಾಣದೆ ಸ್ಥಗಿತಗೊಂಡಿದೆ.
ರಾಜ್ಯ ಸರ್ಕಾರ ಮತ್ತು ಎಲ್ಲಾ ಸಂಬಂಧಿತ ಏಜೆನ್ಸಿಗಳು ಭೂಸ್ವಾಧೀನಕ್ಕೆ ತಾತ್ವಿಕ ಒಪ್ಪಿಗೆ ನೀಡಿದ್ದರೂ, ಕಾರ್ಯಗತಗೊಳಿಸುವಲ್ಲಿ ಯಾವುದೇ ದೃಢವಾದ ಕ್ರಮಗಳು ತೆಗೆದುಕೊಳ್ಳಲಾಗಿಲ್ಲ. ಮುಖ್ಯವಾಗಿ, ವಿಮಾನ ನಿಲ್ದಾಣ ಪ್ರಾಧಿಕಾರದಿಂದ ರಾಜ್ಯ ಸರ್ಕಾರಕ್ಕೂ ಅಥವಾ ಖಾಸಗಿ ನಿರ್ವಹಣಾ ಸಂಸ್ಥೆಗೆ ಯಾವುದೇ ನಿರ್ದೇಶನಗಳು ನೀಡಲಾಗಿಲ್ಲ.
ನಿಲ್ದಾಣದ ಸಮಗ್ರ ಅಭಿವೃದ್ಧಿ ಹಾಗೂ ಸುರಕ್ಷತೆ ದೃಷ್ಟಿಯಿಂದ ರನ್‌ವೇ ವಿಸ್ತರಣೆಗೆ ಹೆಚ್ಚುವರಿ ಭೂಮಿ ಅಗತ್ಯವಿದೆ.ವಿಚಾರದಲ್ಲಿ ಆಡಳಿತಾತ್ಮಕವಾದ ವಿಳಂಬ ನೀತಿಯಿಂದಾಗಿ ಮಂಗಳೂರು ವಿಮಾನ ನಿಲ್ದಾಣದ ಸುರಕ್ಷತೆ, ರನ್‌ವೇ ವಿಸ್ತರಣೆ ಯೋಜನೆ ಮೇಲೆ ಪರಿಣಾಮ ಬೀರುತ್ತಿದೆ.
ಈ ಹಿನ್ನಲೆಯಲ್ಲಿ, ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮತ್ತು ಸಂಬಂಧಿತ ಏಜೆನ್ಸಿಗಳ ಜತೆ ಸಮಾಲೋಚನೆ ನಡೆಸಿ ಮುಂದಿನ ಹಂತದ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಂಸದ ಕ್ಯಾ. ಚೌಟ ಅವರು ಸದನದಲ್ಲಿ ಆಗ್ರಹ ವ್ಯಕ್ತ ಪಡಿಸಿದ್ದಾರೆ.
ಹೆಚ್ಚುವರಿ ಭೂಮಿ ಸ್ವಾಧೀನಪಡಿಸುವುದರಿಂದ ಮಂಗಳೂರು ವಿಮಾನ ನಿಲ್ದಾಣದ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ. ಮಂಗಳೂರು ಈಗಾಗಲೇ ವಾಣಿಜ್ಯ ನಗರಿಯಾಗಿ ಬೆಳೆಯುತ್ತಿರುವುದರಿಂದ, ವಿಮಾನ ನಿಲ್ದಾಣದ ವಿಸ್ತರಣೆಯೊಂದಿಗೆ ಪ್ರವಾಸೋದ್ಯಮ ಹಾಗೂ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ದೊರೆಯಲಿದೆ. ಜೊತೆಗೆ, ದೇಶ-ವಿದೇಶದ ಹೆಚ್ಚಿನ ನಗರಗಳಿಗೆ ನೇರ ವಿಮಾನ ಸೇವೆ ಒದಗಿಸುವ ಅನುಕೂಲತೆಯು ಹೆಚ್ಚಾಗುತ್ತದೆ.
ಹೀಗಾಗಿ, ಮಂಗಳೂರು ಏರ್‌ಪೋರ್ಟ್ ಗೆ ಹೆಚ್ಚುವರಿ ಭೂಮಿ ಒದಗಿಸುವುದಕ್ಕೆ ರಾಜ್ಯ ಸರ್ಕಾರ ಸೇರಿದಂತೆ ಸಂಬಂಧಪಟ್ಟ ಏಜೆನ್ಸಿಗಳು ಜರೂರಾಗಿ ಮುಂದಿನ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕೆಂದು ಕೋರಿದ್ದಾರೆ.