ಬೆಳ್ತಂಗಡಿ ತಾಲೂಕಿನ ಸುರಿಮೊಗ್ರು ಗ್ರಾಮದಲ್ಲಿ ಸಂಬಂಧಗಳ ಪಾವಿತ್ರ್ಯವನ್ನು ಕುಂದುಪಡಿಸುವ ಶೋಕಾಂತರ ಘಟನೆಯೊಂದು ಸಂಭವಿಸಿದೆ. ಅಪ್ರಾಪ್ತ ತಂಗಿಯ ಮೇಲೆಯೇ ಅಣ್ಣನು ಲೈಂಗಿಕ ಕಿರುಕುಳ ನೀಡಿದ ಭಯಾನಕ ಸತ್ಯವೊಂದು ಬೆಳಕಿಗೆ ಬಂದಿದೆ.
ಸುಕ್ಕೇರಿ ಮೊಗ್ರು ಹಿರಿಯ ಪ್ರಾಥಮಿಕ ಶಾಲೆಯ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯ ವರ್ತನೆಯಲ್ಲಿ ಅನುಮಾನಗೊಂಡ ಶಿಕ್ಷಕಿಯೋರ್ವರು ವಿಚಾರಣೆ ನಡೆಸಿದಾಗ ಈ ದುರಂತ ಘಟನೆಯೊಂದು ಮುಚ್ಚುಮರೆಯಲ್ಲಿದ್ದ ಸತ್ಯವಾಗಿ ಹೊರಬಂದಿದೆ.
ಬಾಲಕಿಯ ಹೇಳಿಕೆ ಪ್ರಕಾರ, ಈ ಅವಾಚ್ಯ ಕೃತ್ಯವು ದೇವರ ಗುಡ್ಡೆಯ ಮನೆಯಲ್ಲಿ ಹಾಗೂ ಮೂರು ಸಲ ಕುತ್ತೂರಿನ ಅಜ್ಜನ ಮನೆಯಲ್ಲಿ ನಡೆದಿದೆ.
ಘಟನೆ ಕುರಿತು ತಕ್ಷಣ ಬಾಲಕಿಯ ಪೋಷಕರಿಗೆ ಮಾಹಿತಿ ನೀಡಿದ ಶಿಕ್ಷಕಿಯವರು, ಸಮಾಜದಲ್ಲಿ ನೈತಿಕತೆ ಕುಸಿಯುತ್ತಿರುವುದರ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಪೋಷಕರ ದೂರಿನ ಹಿನ್ನೆಲೆಯಲ್ಲಿ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅವನತಿಯ ದಾರಿಗೆ ತಳ್ಳುವ ಕಾರಣವೇನು?
ಇಂತಹ ಘಟನೆಗಳು ಸಂಭವಿಸುವುದಕ್ಕೆ ಕಾರಣವಾದರೂ ಏನು?? ಮಕ್ಕಳಿಗೆ ಸರಿಯಾದ ಸಂಸ್ಕಾರ, ನೈತಿಕತೆ ಹಾಗೂ ಮಾನವೀಯ ಮೌಲ್ಯಗಳ ಅಭ್ಯಾಸ ಕಡಿಮೆಯಾಗಿರುವುದು ಪ್ರಮುಖ ಕಾರಣವಾಯಿತೇ? ಅಥವಾ ಸಣ್ಣ ವಯಸ್ಸಿನಲ್ಲಿಯೇ ಮೊಬೈಲ್ ಹಾಗೂ ಇಂಟರ್‌ನೆಟ್ ಬಳಕೆಯಿಂದ ವಯಸ್ಕ ವಿಷಯಗಳನ್ನು ನೋಡುವುದು, ಮನಸ್ಸಿನಲ್ಲಿ ತಾರತಮ್ಯವನ್ನು ಉಂಟುಮಾಡುವಂತಹ ಅನೇಕ ಅಂಶಗಳು ಸಹ ಈ ಕೆಟ್ಟ ಪ್ರವೃತ್ತಿಗಳಿಗೆ ಕಾರಣವಾಗಬಹುದೇ?
ಆಪ್ತ ಬಾಂಧವ್ಯಗಳ ಪಾವಿತ್ರ್ಯಕ್ಕೆ ಧಕ್ಕೆಯುಂಟು ಮಾಡುವ ಈ ದುರ್ಘಟನೆಗಳು ಮುಂದಿನ ಪೀಳಿಗೆಗೆ ಅಪಾಯದ ಸೂಚನೆ ನೀಡುತ್ತವೆಯೇ? ಇದನ್ನು ತಡೆಗಟ್ಟಲು ಸಮಾಜ ಏನು ಮಾಡಬೇಕು ಎಂಬ ಪ್ರಶ್ನೆ ಕಾಡುತ್ತದೆ ಎಂದು ನಾಗರಿಕರು ಆಕ್ರೋಷ ವ್ಯಕ್ತಪಡಿಸಿತಿದ್ದಾರೆ.