ಮಂಗಳೂರು: ದೇರಳಕಟ್ಟೆ ಮುತ್ತೂಟ್ ಫೈನಾನ್ಸ್ ದರೋಡೆ ಯತ್ನ: ಇಬ್ಬರು ಆರೋಪಿಗಳು ವಶಕ್ಕೆ

  • 30 Mar 2025 01:21:02 PM

ಮಂಗಳೂರು: ಶನಿವಾರ ತಡರಾತ್ರಿ ದೇರಳಕಟ್ಟೆ ಜಂಕ್ಷನ್‌ನಲ್ಲಿರುವ ಮುತ್ತೂಟ್ ಫೈನಾನ್ಸ್‌ ನ ದರೋಡೆಗೆ ಯತ್ನಿಸಿದ ಇಬ್ಬರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.

 

ಕೇರಳ ಮೂಲದ ಖದೀಮರು ಕಟ್ಟಡದ ಮೇಲಂತಸ್ತಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಫೈನಾನ್ಸ್ ಮಳಿಗೆಯ ಬೀಗ ಒಡೆಯಲು ಮುಂದಾದಾಗ ಸೈರನ್ ಸಕ್ರಿಯಗೊಂಡು ಕಂಟ್ರೋಲ್ ರೂಂಗೆ ಮಾಹಿತಿ ರವಾನೆಯಾಯಿತು. ಮೇಲಧಿಕಾರಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ ಪರಿಣಾಮ ಸ್ಥಳಕ್ಕೆ ಧಾವಿಸಿದ ಕೊಣಾಜೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

 

ಬಂಧಿತರನ್ನು ಕಾಂಞಂಗಾಡ್‌ನ ಮುರಳಿ ಮತ್ತು ಕಾಸರಗೋಡಿನ ಹರ್ಷದ್ ಎಂದು ಗುರುತಿಸಲಾಗಿದೆ. ಪರಾರಿಯಾಗಿರುವ ಮತ್ತೋರ್ವ ಆರೋಪಿ ಅಬ್ದುಲ್ ಲತೀಫ್‌ಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾದ ಡ್ರಿಲ್ ಮೆಷಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ.

 

ಮುತ್ತೂಟ್ ಫೈನಾನ್ಸ್‌ನಲ್ಲಿ ಅಳವಡಿಸಿದ್ದ ಉನ್ನತ ಮಟ್ಟದ ರಕ್ಷಣಾ ವ್ಯವಸ್ಥೆಯಿಂದ ಕಳ್ಳತನವು ವಿಫಲಗೊಂಡಿದೆ. ಘಟನಾ ಸ್ಥಳಕ್ಕೆ ಎಸಿಪಿ ಧನ್ಯ ನಾಯಕ್ ಹಾಗೂ ಕೊಣಾಜೆ ಇನ್ಸ್‌ಪೆಕ್ಟರ್ ರಾಜೇಂದ್ರ ನೇತೃತ್ವದ ಪೊಲೀಸರು ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.