ಬೆಳ್ತಂಗಡಿ: ಬೈಕ್‌ಗಳ ನಡುವೆ ಭೀಕರ ಅಪಘಾತ; ಯಕ್ಷಗಾನ ಭಾಗವತ ಸತೀಶ್ ಆಚಾರ್ಯ ದುರ್ಮರಣ!

  • 31 Mar 2025 12:55:24 PM

ಬೆಳ್ತಂಗಡಿ: ಬೈಕ್‌ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯಕ್ಷಗಾನ ಭಾಗವತರೊಬ್ಬರು ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ಅಂಡಿಂಜೆಯ ಕಿಲಾರ ಮಾರಿಕಾಂಭ ದೇವಸ್ಥಾನದ ತಿರುವು ರಸ್ತೆಯಲ್ಲಿ ಸಂಭವಿಸಿದೆ.

 

ಮೃತರನ್ನು ವೇಣೂರು ಅಂಡಿಂಜೆ ನಿವಾಸಿ ಸತೀಶ್ ಆಚಾರ್ಯ (40) ಎಂದು ಗುರುತಿಸಲಾಗಿದೆ. ಇವರು ಮಂಗಳಾದೇವಿ ಯಕ್ಷಗಾನ ಮೇಳದ ಭಾಗವತರಾಗಿದ್ದರು.

 

ಮಾ. 31ರಂದು ಸುಳ್ಯದಲ್ಲಿ ನಡೆದ ಯಕ್ಷಗಾನ ಪ್ರದರ್ಶನ ಮುಗಿಸಿ, ಬೆಳಗಿನ ಜಾವ 4 ಗಂಟೆ ಸುಮಾರಿಗೆ ತಮ್ಮ ಬೈಕ್‌ನಲ್ಲಿ ನಾರಾವಿಯಿಂದ ಅಂಡಿಂಜೆಗೆ ಮರಳುತ್ತಿದ್ದರು.

 

 ಈ ವೇಳೆಯಲ್ಲಿ ಅಂಡಿಂಜೆ ಕಿಲಾರ ಮಾರಿಗುಡಿ ಸಮೀಪ ತಿರುವಿನಲ್ಲಿ ಎದುರಿನಿಂದ ಬಂದ ಬೈಕ್‌ ನಡುವೆ ಭೀಕರ ಡಿಕ್ಕಿ ಸಂಭವಿಸಿ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದೂ ತಿಳಿದು ಬಂದಿದೆ.

 

ಘಟನೆಯಲ್ಲಿ ಎದುರಿನ ಬೈಕ್‌ನಲ್ಲಿ ಸವಾರರು ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ವೇಣೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

 

ಮೃತರು ತಾಯಿ, ಸಹೋದರಿ, ಸಹೋದರ ಹಾಗೂ ಬಂಧುವರ್ಗವನ್ನು ಅಗಲಿದ್ದಾರೆ.