ಬೆಂಗಳೂರು: ರಾಜ್ಯದ ಜನತೆಯ ಮೇಲೆ ಅನಾವಶ್ಯಕ ಬೆಲೆ ಏರಿಕೆಯ ಹೊರೆ ಹಾಕಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಏಪ್ರಿಲ್ 2ರಂದು ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿಯನ್ನು ಆಯೋಜಿಸಲಾಗಿದೆ.
ಧರಣಿಯ ಕುರಿತು ವಿವರಗಳನ್ನು ಹಂಚಿಕೊಳ್ಳಲು ಇಂದು ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಈ ಪತ್ರಿಕಾಗೋಷ್ಠಿಯಲ್ಲಿ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭಾಗಿಯಾಗಿದ್ದರು. ಸರಕಾರದ ಈ ನಿರ್ಧಾರವು ಸಾಮಾನ್ಯ ಜನರ ಜೀವನದ ಮೇಲೆ ಹೊರೆಯಾಗಿದ್ದು, ಇದರ ವಿರುದ್ಧ ಹೋರಾಟ ಅಗತ್ಯವಿದೆ ಎಂದು ಅವರು ಹೇಳಿದರು.
ರಾಜ್ಯದ ಜನತೆ ಬೆಲೆ ಏರಿಕೆಗೆ ಕಂಗೆಟ್ಟಿದ್ದು, ಈ ಹೊಸ ದರ ಏರಿಕೆಗಳು ಅವರ ಜೀವನವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಹಿನ್ನೆಲೆಯಲ್ಲಿ, ಸರಕಾರದ ಅವ್ಯಾಹತ ಬೆಲೆ ಏರಿಕೆ ನೀತಿಗಳಿಗೆ ವಿರೋಧ ವ್ಯಕ್ತಪಡಿಸಲು ಅಹೋರಾತ್ರಿ ಧರಣಿ ಅಗತ್ಯವಾಗಿದೆ ಎಂದು ಪ್ರತಿಭಟನಾಕಾರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.