ಪಣಜೆ: ಆರ್ಲಪದವಿನಲ್ಲಿ ಕಾನೂನು ಉಲ್ಲಂಘನೆ – ಅಕ್ರಮ ಚಿಲ್ಲರೆ ಮದ್ಯ ಮಾರಾಟದ ವಿರುದ್ಧ ದೂರು!

  • 02 Apr 2025 10:46:48 AM

ಪಣಜೆ: ಪಣಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಆರ್ಲಪದವು ಮದೀನ ವೈನ್ ಶಾಪ್‌ನಲ್ಲಿ ಕಾನೂನುಬಾಹಿರವಾಗಿ ಚಿಲ್ಲರೆ ಮದ್ಯ ಮಾರಾಟ ನಡೆಯುತ್ತಿರುವ ಕುರಿತು ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

 

ಸಾರ್ವಜನಿಕರು ನೀಡಿದ ಮಾಹಿತಿ ಪ್ರಕಾರ, ಈ ಅಂಗಡಿಯಲ್ಲಿ ಚಿಲ್ಲರೆ ಮದ್ಯ ಮಾರಾಟ ನಡೆಯುವುದಷ್ಟೇ ಅಲ್ಲದೆ, ಅಲ್ಲೇ ಕುಳಿತು ಮದ್ಯಪಾನ ಮಾಡುವುದರಿಂದ ಸಾರ್ವಜನಿಕ ಶಾಂತಿ ಭಂಗ ಉಂಟಾಗುತ್ತಿದೆ.ಅದಲ್ಲದೆ ಮದ್ಯಪಾನ ಮಾಡಿದ ಕೆಲವರು ಸ್ಥಳದಲ್ಲೇ ಗಲಾಟೆ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿರುವ ಕುರಿತು ಸಾಕಷ್ಟು ದೂರುಗಳು ಕೇಳಿ ಬರುತ್ತಿದೆ ಎಂದು ತಿಳಿದು ಬಂದಿದೆ.

 

ಮಧ್ಯ ಮಾರಾಟದ ಕುರಿತಾಗಿ ಕಾನೂನುಗಳ ಪ್ರಕಾರ, ವೈನ್ ಶಾಪ್‌ಗಳಲ್ಲಿ ಚಿಲ್ಲರೆ ಮಾರಾಟ ಮಾಡಲು ಅನುಮತಿಯಿರುವುದಿಲ್ಲ. ಆದರೂ ಈ ನಿಯಮವನ್ನು ಉಲ್ಲಂಘಿಸಿ ವ್ಯಾಪಾರ ನಡೆಸುತ್ತಿರುವುದು ಕಾನೂನುಬಾಹಿರ ಚಟುವಟಿಕೆಯಾಗಿದ್ದು ಸಾರ್ವಜನಿಕರಲ್ಲಿ ಅಸಮಾಧಾನ ಉಂಟುಮಾಡಿದೆ.

 

ಸಾರ್ವಜನಿಕರ ದೂರಿನ ಮೇರೆಗೆ ಅಕ್ಷಯ್ ರಜಪೂತ್ ಅವರು ಈ ಬಗ್ಗೆ ದೂರು ನೀಡಿದ್ದು, ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ನಡೆಯುತ್ತಿರುವ ಈ ಕಾನೂನುಬಾಹಿರ ಚಟುವಟಿಕೆ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಸಾರ್ವಜನಿಕ ಶಾಂತಿಯನ್ನೂ ಕಾಪಾಡುವಂತೆ ಗ್ರಾಮ ಪಂಚಾಯಿತಿ ಹಾಗೂ ಅಭಿವೃದ್ಧಿ ಅಧಿಕಾರಿಗಳನ್ನು ಮನವಿ ಮಾಡಿದ್ದಾರೆ.

 

ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ನಡೆಯುತ್ತಿರುವ ಈ ಕಾನೂನುಬಾಹಿರ ಚಟುವಟಿಕೆ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಸಾರ್ವಜನಿಕ ಶಾಂತಿಯನ್ನೂ ಕಾಪಾಡುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.