ಮಂಗಳೂರು: ಜೈಲಿನ ಜಾಮರ್ ಸಮಸ್ಯೆ ವಿರುದ್ಧ ಬಿಜೆಪಿ ಭಾರಿ ಪ್ರತಿಭಟನೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ವೇದವ್ಯಾಸ ಕಾಮತ್ ಆಕ್ರೋಶ!

  • 05 Apr 2025 03:56:43 PM


ಮಂಗಳೂರು: ಮಂಗಳೂರು ಜೈಲಿನ ಜಾಮರ್ ಸಮಸ್ಯೆ ಬಗೆಹರಿಸದೇ ಇರುವುದನ್ನು ಖಂಡಿಸಿ, ಮಂಗಳೂರು ನಗರ ದಕ್ಷಿಣ ಬಿಜೆಪಿ ಮಂಡಲದ ನೇತೃತ್ವದಲ್ಲಿ ಜೈಲು ಎದುರು ರಸ್ತೆಯ ಅಡ್ಡೆ (ರಾಸ್ತಾ ರೋಕೋ) ರೂಪದಲ್ಲಿ ಭಾರಿ ಪ್ರತಿಭಟನೆ ನಡೆಯಿತು.

 

ಈ ವೇಳೆಯಲ್ಲಿ ಮಾತನಾಡಿದ ಶಾಸಕರಾದ ವೇದವ್ಯಾಸ ಕಾಮತ್ ಅವರು, ಜಾಮರ್ ಸಮಸ್ಯೆಯನ್ನು ಬಗೆಹರಿಸಲು ಜೈಲು ಅಧಿಕಾರಿಗಳು, ಪೊಲೀಸ್ ಕಮಿಷನರ್, ಜಿಲ್ಲಾಧಿಕಾರಿ ಮತ್ತು ಗೃಹ ಸಚಿವರಿಗೆ ಅನೇಕ ಬಾರಿ ಮಾಹಿತಿ ನೀಡಿದರೂ ಸಹ ಯಾವುದೇ ರೀತಿಯ ಸ್ಪಂದನೆ ಇಲ್ಲ. 

 

ಕಾಂಗ್ರೆಸ್ ಆಡಳಿತದಲ್ಲಿ ಸಾರ್ವಜನಿಕರು ಬೀದಿಗಿಳಿದಾಗ ಮಾತ್ರ ಸರ್ಕಾರ ಎಚ್ಚೆತ್ತುಕೊಳ್ಳುವುದು ಎಂದು ಅವರು ಆರೋಪಿಸಿದರು.

 

ಅವರು ಮುಂದಾಗಿ, ಜೈಲಿನೊಳಗೆ ಮೊಬೈಲ್ ನೆಟ್ವರ್ಕ್ ಸಿಗುತ್ತಾ ಇದೆ, ಆದರೆ ಜೈಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತ್ರ ಜನರಿಗೆ ಈ ಸಮಸ್ಯೆ ಎದುರಾಗುತ್ತಿದೆ ಎಂದೂ ಇತ್ತೀಚೆಗೆ ತುರ್ತು ಚಿಕಿತ್ಸೆಯಿಲ್ಲದೆ ಒಬ್ಬ ರೋಗಿ ಸಾವನ್ನಪ್ಪಿರುವ ಘಟನೆ ಸಹ ಸಂಭವಿಸಿದೆ ಇದರ ಹೊಣೆ ಯಾರದು? ಜೈಲು ಅಧಿಕಾರಿಗಳಾ? ಉಸ್ತುವಾರಿ ಸಚಿವರಾ? ಅಥವಾ ಮುಖ್ಯಮಂತ್ರಿಗಳಾ?” ಎಂದು ಪ್ರಶ್ನಿಸಿದರು.

 

ಪ್ರತಿಭಟನೆಯ ವೇಳೆ, ಆಕ್ರೋಶಿತ ಬಿಜೆಪಿ ಕಾರ್ಯಕರ್ತರು ಜೈಲು ಬಳಿ ಹಾಕಲಾಗಿದ್ದ ಬ್ಯಾರಿಕೇಡ್ಗಳನ್ನು ನುಗ್ಗಲು ಯತ್ನಿಸಿದಾಗ, ಅವರನ್ನು ತಡೆಯಲು ಪೊಲೀಸರೊಂದಿಗೆ ತಳ್ಳಾಟ ನಡೆದು ಕಂಬ್ಳ ವಾರ್ಡಿನ ಮಾಜಿ ಕಾರ್ಪೊರೇಟರ್ ಲೀಲಾವತಿ ಪ್ರಕಾಶ್ ಅಸ್ವಸ್ಥಗೊಂಡು ಕೆಎಂಸಿ ಜ್ಯೋತಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

 

ಪ್ರತಿಭಟನೆಯಲ್ಲಿ ರಮೇಶ್ ಕಂಡೆಟ್ಟು, ರವಿಶಂಕರ್ ಮಿಜಾರು, ಪೂರ್ಣಿಮಾ, ಪ್ರೇಮಾನಂದ ಶೆಟ್ಟಿ, ದಿವಾಕರ ಪಾಂಡೇಶ್ವರ, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಸುಧೀರ್ ಶೆಟ್ಟಿ ಕಣ್ಣೂರು, ಕಿಶೋರ್ ಕೊಟ್ಟಾರಿ, ಭಾನುಮತಿ, ಮನೋಹರ್ ಕದ್ರಿ, ಶಕೀಲಾ ಖಾವ್, ಅಶ್ವಿತ್ ಕೊಟ್ಟಾರಿ ಸೇರಿದಂತೆ ಅನೇಕ ಬಿಜೆಪಿ ನಾಯಕರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದಾರೆ.