ಬಂಟ್ವಾಳ: ಪಾಣೆಮಂಗಳೂರು ಪೇಟೆಯಲ್ಲಿ ದ್ವಿಚಕ್ರ ಸವಾರನಿಗೆ ರಿಕ್ಷಾ ಚಾಲಕರಿಂದ ಹಲ್ಲೆ, ಜೀವ ಬೆದರಿಕೆ

  • 05 Apr 2025 06:10:21 PM


ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪಾಣೆಮಂಗಳೂರು ಪೇಟೆಯಲ್ಲಿ ದ್ವಿಚಕ್ರ ವಾಹನ ಸವಾರನೊಬ್ಬನ ಮೇಲೆ ರಿಕ್ಷಾ ಚಾಲಕನೋರ್ವ ಹಲ್ಲೆ ನಡೆಸಿದ ಘಟನೆ ಸಂಭವಿಸಿದೆ.

 

ಅಪಾಯದಿಂದ ತಪ್ಪಿಸಿಕೊಂಡ ಸವಾರನಿಗೆ ಜೀವ ಬೆದರಿಕೆಯೊಡ್ಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

 

ನರಿಕೊಂಬು ಗ್ರಾಮದ ನಾಯಿಲ ನಿವಾಸಿ ಸುನಿಲ್ ಎಂಬಾತನ ಮೇಲೆ, ನಂದಾವರ ನಿವಾಸಿ ರಿಕ್ಷಾ ಚಾಲಕ ಅಝೀಲ್ ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ.

 

 ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಘಟನೆಯ ವೇಳೆ, ಸುನಿಲ್ ತನ್ನ ಸ್ನೇಹಿತ ದಯಾನಂದನೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ, ಅಝೀಲ್ ತನ್ನ ರಿಕ್ಷಾವನ್ನು ಯಾವುದೇ ಸೂಚನೆ ನೀಡದೇ ತಿರುಗಿಸಿದಾಗ, ಸುನಿಲ್ ಅವರ ಬೈಕ್‌ಗೆ ಡಿಕ್ಕಿ ಹೊಡೆಯುವುದು ಕೂದಲೆಳೆ ಅಂತರದಲ್ಲಿ ತಪ್ಪಿ ಹೋಗಿತ್ತು. ಘಟನೆ ಕುರಿತಾಗಿ ವಿಚಾರಿಸಿದ್ದಕ್ಕೆ ಅಝೀಲ್ ಆಕ್ರೋಶಗೊಂಡು ಹಲ್ಲೆ ನಡೆಸಿದ್ದಾನೆ ಎಂದು ಮಾತ್ರವಲ್ಲದೇ, ಕೊಲ್ಲುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ತಿಳಿದು ಬಂದಿದೆ.

 

ಘಟನೆ ಸಂಬಂಧ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.