ಮಂಗಳೂರು: ಸೆಂಟ್ರಲ್ ವಾರ್ಡ್‌ನಲ್ಲಿ ನೀರಿನ ಸಮಸ್ಯೆ; ಸಮಸ್ಯೆ ಬಗೆಹರಿಯದೇ ಇದ್ದಲ್ಲಿ ಪ್ರತಿಭಟನೆ ಎಚ್ಚರಿಕೆ!

  • 09 Apr 2025 01:25:40 PM


ಮಂಗಳೂರು : ಮಹಾನಗರ ಪಾಲಿಕೆಯ 41ನೇ ಸೆಂಟ್ರಲ್ ವಾರ್ಡ್‌ನಲ್ಲಿ ಕಳೆದ ಹಲವು ತಿಂಗಳಿಂದ ಕುಡಿಯುವ ನೀರಿನ ಅಭಾವದಿಂದ ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆ ನಿಕಟಪೂರ್ವ ಪಾಲಿಕೆ ಸದಸ್ಯೆ ಶ್ರೀಮತಿ ಪೂರ್ಣಿಮಾ ರವರ ನೇತೃತ್ವದಲ್ಲಿ ವಾರ್ಡ್ ನಿವಾಸಿಗಳು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಮನವಿ ಸಲ್ಲಿಸಿದ್ದಾರೆ.

 

ಈ ಸಂದರ್ಭದಲ್ಲಿ ಮಾತನಾಡಿದ ಪೂರ್ಣಿಮಾ ಅವರು, ಗೌರಿಮಠ, ಟಿ.ಟಿ.ರಸ್ತೆ, ಮಾರ್ಕೆಟ್ ರಸ್ತೆ, ಶರವು ದೇವಸ್ಥಾನ ರಸ್ತೆ, ಮಹಾಮಾಯ ಟೆಂಪಲ್ ರಸ್ತೆ, ಬಂದರು ಪ್ರದೇಶಗಳಲ್ಲಿ ಕಳೆದ 2-3 ತಿಂಗಳಿನಿಂದ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ ಎಂದೂ “ನಾನು ಈಗ ಅಧಿಕಾರದಲ್ಲಿ ಇಲ್ಲದಿದ್ದರೂ, ನನ್ನ ವಾರ್ಡಿನ ಜನರ ದುಃಖವನ್ನು ಮರೆಮಾಡುವುದಿಲ್ಲ. ಜನರ ಪರವಾಗಿ ಮಾತಾಡುವುದು ನನ್ನ ಕರ್ತವ್ಯ ಎಂದು ಹೇಳಿದರು.

 

“ಉಸ್ತುವಾರಿ ಸಚಿವರು ಮಂಗಳೂರಿನಲ್ಲಿ ಇನ್ನೂ ಎರಡು ತಿಂಗಳು ನೀರಿನ ಪೂರೈಕೆ ಸಾಧ್ಯವಿದೆ ಎಂದು ಹೇಳಿದ್ದಾರೆ. ಆದರೆ, ಅಧಿಕಾರಿಗಳು ನೀರನ್ನು ಬಿಡದೇ ಇರುವುದು ಯಾಕೆ ಎನ್ನುವ ಪ್ರಶ್ನೆ ಇದೆ. ಇನ್ನೂ ಎರಡು ದಿನ ಕಾಯುತ್ತೇವೆ ಸಮಸ್ಯೆ ಬಗೆಹರಿಯದೆ ಇದ್ದಲ್ಲಿ ಜನರೊಂದಿಗೆ ರಸ್ತೆಗಿಳಿದು ಪ್ರತಿಭಟನೆ ನಡೆಸುವ ನಿರ್ಧಾರ ಹೊಂದಿದ್ದೇವೆ,” ಎಂದು ಅವರು ಎಚ್ಚರಿಕೆ ನೀಡಿದರು.

 

ವಾರ್ಡ್ ನಿವಾಸಿಯಾದ ರಮೇಶ್ ನೀರು ಕೊಡೋಕೆ ಆಗದಿದ್ದರೆ, minister ಹೇಳಿದ ಮಾತಿಗೆ ಹೇಗೆ ನಂಬಿಕೆಯಾಗೋದು? ನಮಗೆ ಸಾಕಾಗಿದೆ. ನಮಗಿರೋದು ಒಂದೇ ಒಂದು ಬೇಡಿಕೆ – ನೀರು ಕೊಡಿ ಇಲ್ಲವೇ ನೇರವಾಗಿ ಮಾತಾಡಿ.

 

 ಪೂರ್ಣಿಮಾ ಅಕ್ಕ ನಮ್ಮ ಪರವಾಗಿ ನಿಲ್ಲುತ್ತಿದ್ದರೆ, ನಾವು ಕೂಡಾ ಅವರ ಜೊತೆ ಇರುತ್ತೇವೆ,” ಎಂದು ಕಿಡಿಕಾರಿ ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದರು.

 

ಈ ಸಂದರ್ಭದಲ್ಲಿ ಸ್ಥಳೀಯರಾದ ಗಣಪತಿ ಕಾಮತ್, ಮುರಳಿಧರ್ ನಾಯಕ್, ಪೂರ್ಣಿಮಾ ರಾವ್, ರವೀಂದ್ರ ಮಲ್ಯ, ಶ್ರೀಮತಿ, ಸತೀಶ್ ಮಲ್ಯ, ವಿಜಯಲಕ್ಷ್ಮಿ, ಸ್ಮಿತಾ ಶೆಣೈ, ವಿದ್ಯಾ, ತ್ರಿಷಾ ಮೊದಲಾದವರು ಭಾಗವಹಿಸಿದ್ದರು.