ದಕ್ಷಿಣ ಕನ್ನಡ ಪಿಯುಸಿ ರ‍್ಯಾಂಕ್‌ ಹೋಲ್ಡರ್‌ಗಳ ಸಾಧನೆಗೆ ಜಿಲ್ಲಾಧಿಕಾರಿಗಳಿಂದ ಸನ್ಮಾನ!

  • 09 Apr 2025 01:44:48 PM


ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಅಪೂರ್ವ ಗೌರವ ಸಲ್ಲಿಸಿದರು.

 

 ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಈ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಲ್ಲಿಸಿ ಸಂತಸವನ್ನು ವ್ಯಕ್ತಪಡಿಸಿದರು.

 

ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕೆನರಾ ಪದವಿ ಪೂರ್ವ ಕಾಲೇಜಿನ ದೀಪಶ್ರೀ ಹಾಗೂ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಎಕ್ಸ್‌ಪರ್ಟ್ ಕಾಲೇಜಿನ ಅಮೂಲ್ಯ ಕಾಮತ್ ಅವರನ್ನು ಏಪ್ರಿಲ್ 8ರಂದು ಫಲಿತಾಂಶದಪ್ರಕಟವಾದ ನಂತರ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಶೇಷ ಸನ್ಮಾನ ಕಾರ್ಯಕ್ರಮದಲ್ಲಿ ಗೌರವಿಸಿದರು.

 

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಡಾ. ಕೆ. ಆನಂದ್ ಅವರು ಸಹ ಉಪಸ್ಥಿತರಿದ್ದರು.

 

ಸನ್ಮಾನದ ಬಳಿಕ ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಹೃದಯಂಗಮ ಸಂವಾದ ನಡೆಸಿ, ಅವರ ಓದುವ ವಿಧಾನ, ಸಮಯದ ನಿರ್ವಹಣೆ ಹಾಗೂ ಗುರಿಯತ್ತ ಕೈಗೊಂಡ ಪರಿಶ್ರಮದ ಕುರಿತಾಗಿ ಕೇಳಿ ತಿಳಿದುಕೊಂಡರು.

 

 ವಿದ್ಯಾರ್ಥಿಗಳ ಆತ್ಮವಿಶ್ವಾಸ ಹಾಗೂ ಶ್ರದ್ಧೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

 

ಕಾರ್ಯಕ್ರಮದಲ್ಲಿ ಅಮೂಲ್ಯ ಅವರ ಪೋಷಕರು ಡಾ. ದಿನೇಶ್ ಕಾಮತ್ ಮತ್ತು ಡಾ. ಅನುರಾಧಾ ಕಾಮತ್ ಹಾಗೂ ದೀಪಶ್ರೀ ಅವರ ಪೋಷಕರು ಅಶೋಕ್ ಎಸ್. ಮತ್ತು ಸುಮಾ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶ್ರೀಧರ್ ಹೆಚ್. ಜಿ., ಶಾಖಾಧಿಕಾರಿ ನಿತಿನ್ ಶೆಟ್ಟಿ, ಕೆನರಾ ಕಾಲೇಜಿನ ಪ್ರಾಂಶುಪಾಲೆ ಲತಾ ಮಹೇಶ್ವರಿ ಹಾಗೂ ಎಕ್ಸ್‌ಪರ್ಟ್ ಕಾಲೇಜಿನ ಪ್ರಾಂಶುಪಾಲ ರಾಮಚಂದ್ರ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.