ಮಂಜೇಶ್ವರ: ಮುಲ್ಕಿ ನಿವಾಸಿಯಾಗಿದ್ದ ಆಟೋ ಚಾಲಕ ಮುಹಮ್ಮದ್ ಶರೀಫ್ ಸಾವಿಗೀಡಾದ ಪ್ರಕರಣ ಇದೀಗ ನಿಗೂಢ ಕೊಲೆಯ ರೂಪ ತಾಳುತ್ತಿದೆ.
ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಶರೀಫ್ ರವರ ಕೈ, ತಲೆ ಹಾಗೂ ಕುತ್ತಿಗೆಯ ಮೇಲೆ ತೀವ್ರವಾದ ಮಾರಕ ಅಸ್ತ್ರಗಳಿಂದ ಆದ ಗಾಯ ಕಾಣಿಸಿಕೊಂಡಿವೆ ಎಂಬುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಗುರುವಾರ ರಾತ್ರಿ ಮಂಜೇಶ್ವರ ಸಮೀಪದ ಕುಂಜತ್ತೂರು ಪದವು ಎಂಬ ನಿರ್ಜನ ಪ್ರದೇಶದಲ್ಲಿದ್ದ ಬಾವಿಯೊಂದರಲ್ಲಿ ಶರೀಫ್ ರವರ ಮೃತದೇಹ ಪತ್ತೆಯಾಗಿತ್ತು.
ಕುತ್ತಿಗೆಯ ಭಾಗದಲ್ಲಿ ಉಂಟಾದ ಗಂಭೀರವಾದ ಗಾಯ ಅವರ ಸಾವಿಗೆ ನೇರ ಕಾರಣವೆಂಬ ಶಂಕೆ ಮೂಡಿಸಿದೆ.
ಹಲವಾರು ಗಂಟೆಗಳ ಕಾಲ ಮೃತದೇಹ ನೀರಿಲಲ್ಲಿದ್ದರ ಕೂಡ , ಶ್ವಾಸಕೋಶದೊಳಗೆ ನೀರು ನುಗ್ಗಿಲ್ಲ. ಆದ್ದರಿಂದ ಶರೀಫ್ ರವರನ್ನು ಕೊಂದ ನಂತರವೇ ಬಾವಿಗೆ ಎಸೆದು ಇರಬಹುದು ಎಂಬ ಅನುಮಾನಕ್ಕೆ ಕಾರಣ ಉಂಟುಮಾಡಿದೆ ಎಂದು ತಿಳಿದುಬಂದಿದೆ.
ಸ್ಥಳೀಯರು ಗುರುವಾರ ರಾತ್ರಿಯ ವೇಳೆ ಬಾವಿಯ ಸಮೀಪ ನಿರ್ದಿಷ್ಟವಾಗಿ ನಿಲ್ಲಿಸಿದ ರಿಕ್ಷಾವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿರುತ್ತಾರೆ. ಈ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದಲ್ಲಿ ಬಾವಿಯಲ್ಲಿ ಶರೀಫ್ ರವರ ಶವ ಪತ್ತೆಯಾಯಿತು.
ಶುಕ್ರವಾರ ಬೆಳಿಗ್ಗೆ ಮೃತದೇಹವನ್ನು ಮೇಲಕ್ಕೆತ್ತಿ ಮಹಜರು ನಡೆಸಲಾಯಿತು. ಮರಣದ ಹಿಂದಿರುವ ರಹಸ್ಯ ಪತ್ತೆಹಚ್ಚಲು ಮಂಜೇಶ್ವರ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಅನೂಪ್ ಕುಮಾರ್ ನೇತೃತ್ವದಲ್ಲಿ ತೀವ್ರ ತನಿಖೆ ಮುಂದುವರಿದಿದೆ.
ಬುಧವಾರ ರಾತ್ರಿ ಸುಮಾರು ಹತ್ತು ಗಂಟೆಗೆ ಮೂವರು ವ್ಯಕ್ತಿಗಳು ಆಟೋವನ್ನು ಬಾಡಿಗೆಗೆ ತೆಗೆದುಕೊಂಡಿದ್ದರು ಎಂಬ ಮಾಹಿತಿಯ ಮೇಲೆ ಈ ಮೂವರನ್ನು ಕೇಂದ್ರೀಕರಿಸಿ ತನಿಖೆ ನಡೆಯುತ್ತಿದೆ.
ಇಂತಹ ಕ್ರೂರವಾದ ಕೊಲೆ ಮಂಜೇಶ್ವರ ಪ್ರದೇಶದಲ್ಲಿ ಆತಂಕದ ವಾತಾವರಣವನ್ನುಂಟು ಮಾಡಿದ್ದಲ್ಲದೆ ಸಾರ್ವಜನಿಕರಲ್ಲಿ ಭೀತಿ ವ್ಯಕ್ತವಾಗಿದೆ.