ಮಂಗಳೂರು: ಕೊಡಕಾಲ ರಸ್ತೆ ಇನ್ನು ಮೇಲೆ ಶ್ರೀ ವೈದ್ಯನಾಥ ರಸ್ತೆ; ವೇದವ್ಯಾಸ ಕಾಮತ್ ಶಾಸಕರಿಂದ ನಾಮಫಲಕ ಅನಾವರಣ!

  • 13 Apr 2025 12:32:54 PM


ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಳಪೆ ಉತ್ತರ 51ನೇ ವಾರ್ಡಿನಲ್ಲಿನ ಕೊಡಕಾಲ ವೈದ್ಯನಾಥ ರಸ್ತೆಯು ಅಭಿವೃದ್ಧಿಗೊಂಡ ನಂತರ ಶ್ರೀ ವೈದ್ಯನಾಥ ರಸ್ತೆ ಎಂಬ ಹೆಸರಿನಿಂದ ಅಧಿಕೃತ ನಾಮಕರಣ ನೀಡಿ ನಾಮಫಲಕವನ್ನು ಶಾಸಕ ವೇದವ್ಯಾಸ ಕಾಮತ್ ಅವರು ಅನಾವರಣಗೊಳಿಸಿದರು.

 

ಕಾರ್ಯಕ್ರಮದಲ್ಲಿ ಮಾತನಾಡಿದ ಇವರು ಕಣ್ಣೂರು ಅಳಪೆ ಪ್ರದೇಶದ ಕೊಡಕಾಲ ವೈದ್ಯನಾಥ ದೈವಸ್ಥಾನವು ಈ ಭಾಗದ ಪುರಾತನ ಹಾಗೂ ಪ್ರಮುಖ ದೈವಸ್ಥಾನಗಳಲ್ಲಿ ಒಂದಾಗಿದ್ದು, ಅದಕ್ಕೆ ಸಂಪರ್ಕ ಹೊಂದಿರುವ ರಸ್ತೆಯನ್ನು ಸ್ಥಳೀಯರ ಮನವಿಯ ಮೇರೆಗೆ ಅಭಿವೃದ್ಧಿಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ಅಧಿಕೃತ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದು ಹೇಳಿದರು.

 

 ಈ ಸಂಬಂಧ ನಿಕಟ ಪೂರ್ವ ಪಾಲಿಕೆ ಸದಸ್ಯೆ ರೂಪಶ್ರೀ ಪೂಜಾರಿ ಅವರು ಪಾಲಿಕೆಯಲ್ಲಿ ಪ್ರಸ್ತಾವನೆ ಸಲ್ಲಿಸಿ ಆ ಹೆಸರು ಅಧಿಕೃತಗೊಳಿಸುವುದರಲ್ಲಿ ಮುಂಚೂಣಿಯಲ್ಲಿದ್ದರು.

 

ಈ ಹಿಂದೆ ಕೆಲವರು ಈ ರಸ್ತೆಯನ್ನು ಅನಧಿಕೃತವಾಗಿ 'ಯೂಸುಫ್ ನಗರ' ಎಂದು ಕರೆಯುತ್ತಿದ್ದರೆಂದೂ ಮಹಾನಗರ ಪಾಲಿಕೆಯ ದಾಖಲೆಗಳಲ್ಲಿ ಆ ಹೆಸರು ಇಲ್ಲದಿರುವುದರಿಂದ ಇನ್ನು ಮುಂದೆ ಶ್ರೀ ವೈದ್ಯನಾಥ ರಸ್ತೆ"ಎಂಬ ಅಧಿಕೃತ ಹೆಸರನ್ನು ಬಳಸಬೇಕೆ ಎಂಬುದಾಗಿ ವಿನಂತಿಸಿದರು. 

 

ಪತ್ತೆ ದಾಖಲೆಗಳಿಂದ ಹಿಡಿದು ಗೂಗಲ್ ಮ್ಯಾಪ್‌ನಲ್ಲಿ ಕೂಡ ಈ ಹೆಸರನ್ನೇ ಬಳಸುವಂತೆ ಸ್ಥಳೀಯರಿಗೆ ಅವರು ಸಲಹೆ ನೀಡಿದರು.

 

ಈ ಕಾರ್ಯಕ್ರಮದಲ್ಲಿ ದೈವಸ್ಥಾನದ ಗುತ್ತು ಕುಟುಂಬದ ಪ್ರಮುಖರು, ಬಿಜೆಪಿ ಮುಖಂಡರಾದ ಪ್ರವೀಣ್ ನಿಡ್ಡೇಲ್, ಸುರೇಶ್ ಆಚಾರ್ಯ, ನರೇಶ್ ಸರಿಪಲ್ಲ, ಕೊಡಕಾಲ ಹಿಂದೂ ಹಿತ ರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.