ಬೆಂಗಳೂರು: ಡೀಸೆಲ್ ದರ ಏರಿಕೆಯ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದ ರಾಜ್ಯ ಲಾರಿ ಮಾಲೀಕರ ಸಂಘ, ಇಂದು ಮಧ್ಯರಾತ್ರಿಯಿಂದಲೇ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.
ರಾಜ್ಯದಾದ್ಯಂತ ಸುಮಾರು 6 ಲಕ್ಷಕ್ಕೂ ಹೆಚ್ಚು ಲಾರಿಗಳು ಸೇವೆಯಿಂದ ಹಿಂದೆ ಸರಿಯಲಿದ್ದು, ಇದರ ಪರಿಣಾಮವಾಗಿ ಸರಕು ಸಾಗಣೆಯಲ್ಲಿ ಭಾರೀ ದೊಡ್ಡ ಮಟ್ಟದ ಅಡಚಣೆ ಉಂಟಾಗುವ ಸಾಧ್ಯತೆ ಇದೆ.
ರಾಜ್ಯಕ್ಕೆ ಬರುವ ಹಾಗೂ ಹೊರಹೋಗುವ ಸಾಗಣೆ ವ್ಯವಸ್ಥೆಗಳು ಸಂಪೂರ್ಣ ಸ್ಥಗಿತಗೊಳ್ಳಲಿದೆ.
ಈ 6 ತಿಂಗಳುಗಳಲ್ಲಿ ಸರ್ಕಾರ ಸತತ ಎರಡು ಬಾರಿ ಡೀಸೆಲ್ ದರವನ್ನು ಏರಿಸಿರುವುದು ಲಾರಿ ಮಾಲೀಕರ ಆಕ್ರೋಶಕ್ಕೆ ಕಾರಣವನ್ನುಂಟು ಮಾಡಿದೆ.
ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸರ್ಕಾರಕ್ಕೆ ಹಿಂದಿನವರೆಗೂ ಗಡುವು ನೀಡಲಾಗಿದ್ದರೂ ಯಾವುದೇ ಸ್ಪಂದನೆ ದೊರಕಿಲ್ಲ. ಈ ಹಿನ್ನೆಲೆಯಲ್ಲಿ ಸಂಘ ಇದೀಗ ಹಠಾತ್‌ವಾಗಿ ಮುಷ್ಕರದ ಮಾರ್ಗವನ್ನೇ ಆಯ್ಕೆ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.
ಡೀಸೆಲ್ ದರ ಇಳಿಸದೆ, ಬೇಡಿಕೆಗಳಿಗೆ ಸ್ಪಷ್ಟ ಪರಿಹಾರ ನೀಡದವರೆಗೆ ಈ ಮುಷ್ಕರಕ್ಕೆ ಹಿನ್ನಡೆ ಇಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಈ ಮುಷ್ಕರವು ಕೇವಲ ಇಂಧನದ ದರಕ್ಕಷ್ಟೇ ಸೀಮಿತವಿಲ್ಲದೇ ಟೋಲ್‌ಗೇಟ್ ಶುಲ್ಕ, ಆರ್‌ಟಿಓ ಚೆಕ್‌ಪೋಸ್ಟ್ ಸಮಸ್ಯೆ, ಎಫ್‌ಸಿ ಶುಲ್ಕ ಏರಿಕೆ, ನಗರಗಳಲ್ಲಿ ಲಾರಿಗಳಿಗೆ ವಿಧಿಸುತ್ತಿರುವ ನಿರ್ಬಂಧಗಳು, ಚಾಲಕರ ಭದ್ರತೆ ಮುಂತಾದ ಪ್ರಮುಖ ಸಮಸ್ಯೆಗಳ ವಿರುದ್ಧವೂ ನಡೆಯುತ್ತಿದೆ.
ಡೀಸೆಲ್ ದರವನ್ನು ಜೂನ್ ನಲ್ಲಿ 3 ರೂ. ಮತ್ತೂ ಇದೀಗ 2 ರೂ. ಏರಿಸಿರುವ ಹಿನ್ನೆಲೆಯಲ್ಲಿ, ಈಗ ನಡೆಯಲಿರುವ ಲಾರಿ ಮಾಲೀಕರ ನಿರ್ಣಾಯಕ ಹೋರಾಟವಾಗಿದೆ ಎಂದೆನ್ನಲಾಗಿದೆ.