ಹರಿದ್ವಾರ: ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವದ ಪಾವನ ಉತ್ಸವದ ವೈಭವ!

  • 14 Apr 2025 07:00:38 PM

ಕಾಶೀಮಠದ ಪರಮಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಮಾನೋತ್ಸವವನ್ನು ಎಪ್ರಿಲ್ 8 ರಿಂದ 14ರ ತನಕ ವಿಜೃಂಭಣೆಯಿಂದ ಆಚರಿಸಲಾಯಿತು. 

 

ವಿಶೇಷವಾಗಿ ಎಪ್ರಿಲ್ 14ರಂದು, ಶ್ರೀಗಳ ನೂರನೇ ಜನ್ಮನಕ್ಷತ್ರದ ಅಂಗವಾಗಿ ಉತ್ತರಾಖಂಡದ ಹರಿದ್ವಾರದ ವ್ಯಾಸಾಶ್ರಮದಲ್ಲಿ ಶ್ರದ್ಧಾ ಮತ್ತು ಭಕ್ತಿಯಿಂದ ಸಂಪನ್ನವಾದ ಕಾರ್ಯಕ್ರಮಗಳು ನೆರವೇರಿದವು.  

 

 

ಬೆಳಿಗ್ಗೆ 1008 ಪವಮಾನಾಭಿಷೇಕ ಸೇವೆಯೊಂದಿಗೆ ಆಚರಣೆ ಆರಂಭವಾಯಿತು. ಭಾರತದೆಲ್ಲೆಡೆ ಹರಿಯುವ ಪವಿತ್ರ ನದಿಗಳ ತೀರ್ಥಗಳನ್ನು ಸಂಗ್ರಹಿಸಿ ಹರಿದ್ವಾರದ ವ್ಯಾಸಾಶ್ರಮಕ್ಕೆ ತರಲಾಗಿತ್ತು. 

 

ಈ ತೀರ್ಥದಿಂದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ವೃಂದಾವನದಲ್ಲಿ ಅಭಿಷೇಕ ನಡೆಸಲಾಯಿತು. ಅದಾದಮೇಲೆ 1008 ಬೆಳ್ಳಿ ನಾಣ್ಯಗಳನ್ನು ಸೇವಾದಾರರಿಗೆ ವಿತರಿಸಲಾಯಿತು. ಹನುಮಂತ ದೇವರ ಪಾದಗಳಿಗೆ ಹಾಗೂ ಗುರುಪಾದುಕೆಗೆ ಸ್ವರ್ಣ ಪುಷ್ಪಾರ್ಚನೆ ನೆರವೇರಿತು. ಈ ಪುಷ್ಪಗಳನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ನೀಡಲಾಯಿತು.

 

ಭಕ್ತರಿಗೆ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಂದ ಗಂಧ ಪ್ರಸಾದ ದೊರಕಿತು. ತಿರುಪತಿ ಲಾಡು, ಫಲವಸ್ತು, ಸೀರೆ, ಧೋತಿ ಹಾಗೂ ಮಕ್ಕಳಿಗೆ ವಸ್ತ್ರಗಳನ್ನು ವಿತರಣೆ ಮಾಡಲಾಯಿತು. 

 

 ಸುಧೀಂದ್ರ ವೇದಿಕೆಯಲ್ಲಿ ವಿಷ್ಣು ಸಹಸ್ರನಾಮ ಪಠಣ, ಸಾಮೂಹಿಕ ಕುಂಕುಮಾರ್ಚನೆ, ದುರ್ಗಾ ನಮಸ್ಕಾರ, ಸಹಸ್ರ ಚಂಡಿಕಾಯಾಗ, ಋತ್ಮಿಕಾ ಯಾಗ, ಗುರುಗುಣಗಾನ ಹಾಗೂ ಭಜನೆ ಕಾರ್ಯಕ್ರಮಗಳು ಅದ್ಭುತವಾಗಿ ನೆರವೇರಿದವು.

 

ಸಂಜೆ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಭಕ್ತರಿಗೆ ಆರ್ಶೀವಚನ ನೀಡಿದರು. ಈ ಪುಣ್ಯ ಕಾರ್ಯಕ್ರಮದಲ್ಲಿ ದೇಶದ ನಾನಾ ಭಾಗಗಳಿಂದ ಹಾಗೂ ವಿದೇಶಗಳಿಂದ 4000ಕ್ಕೂ ಹೆಚ್ಚು ಭಕ್ತರು ಭಾಗವಹಿಸಿದರು.

 

ಮುಂಬೈ ಜಿಎಸ್‌ಬಿ ಸೇವಾ ಮಂಡಲ, ಸುಕೃತೀಂದ್ರ ಸ್ವಾಮಿ ಪ್ರತಿಷ್ಠಾನ, ದೆಹಲಿ ಮತ್ತು ಬೆಂಗಳೂರು ಸಮಾಜದ ಪ್ರಮುಖರು ಹಾಗೂ ವೈದಿಕ ವೃಂದದ ಶ್ರಮದಿಂದ ಈ ಮಹೋತ್ಸವ ಯಶಸ್ವಿಯಾಗಿ ನೆರವೇರಿತು.