ಸುಳ್ಯದ ಸಂಪರ್ಕ ಜಾಲ ಬಲಪಡಿಸಲು 6 ಕೋಟಿ ರೂ. ಅನುದಾನ; ಸಂಸದ ಬ್ರಿಜೇಶ್ ಚೌಟ ಅವರಿಂದ ಗುದ್ದಲಿಪೂಜೆ!

  • 15 Apr 2025 09:43:35 PM

ಸುಳ್ಯ: ಕೇಂದ್ರ ಸರ್ಕಾರದ ರಸ್ತೆ ಹಾಗೂ ಮೂಲಸೌಕರ್ಯ ನಿಧಿ (CRIF) ಅಡಿಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿನ ಎರಡು ಪ್ರಮುಖ ರಸ್ತೆಗಳ ಅಭಿವೃದ್ಧಿಗಾಗಿ ಸುಮಾರು 6 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ಇಂದು ಗುದ್ದಲಿಪೂಜೆ ನಡೆಯಿತು.

 

ಸುಳ್ಯ ತಾಲೂಕಿನ ನಿಂತಿಕಲ್ಲು-ಬೆಳ್ಳಾರೆ ರಸ್ತೆಯ ಅಭಿವೃದ್ಧಿಗೆ ಸುಮಾರು 3.72 ಕೋಟಿ ರೂ. ನಷ್ಟದ ಅನುದಾನ ಮೀಸಲಾಗಿ, ಒಟ್ಟು 6.20 ಕಿಮೀ ರಸ್ತೆಯನ್ನು ಸುಧಾರಿಸಲಾಗುತ್ತಿದೆ. ಈ ಕಾಮಗಾರಿಗೆ ಕೂಡ ಇಂದು ನಿಂತಿಕಲ್ಲು ಜಂಕ್ಷನ್‌ನಲ್ಲಿ ಗುದ್ದಲಿಪೂಜೆ ನೆರವೇರಿತು.

 

ಅದೇ ರೀತಿ ಸುಳ್ಯ-ಪೈಚಾರ್-ಬೆಳ್ಳಾರೆ ರಸ್ತೆ ಅಭಿವೃದ್ಧಿಗೆ 2.28 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 3.80 ಕಿಮೀ ಉದ್ದದ ರಸ್ತೆ ಉನ್ನತಿಕರಣವಾಗಲಿದೆ. ಈ ಕಾಮಗಾರಿಗೂ ಇಂದು ನಿಂತಿಕಲ್ಲಿನಲ್ಲಿ ಗುದ್ದಲಿಪೂಜೆ ನೆರವೇರಿಸಲಾಯಿತು.

 

ನಿಂತಿಕಲ್ಲು ಪುತ್ತೂರು-ಸುಳ್ಯ ನಡುವಿನ ಗಡಿಭಾಗವಾಗಿದೆ. ಈ ಎರಡು ರಸ್ತೆಗಳಿಗೆ ಅನುದಾನ ದೊರೆತಿರುವುದು ಇಡೀ ಪ್ರದೇಶದ ಸಾರಿಗೆ ಸಂಪರ್ಕವನ್ನು ಹೆಚ್ಚಿನ ಮಟ್ಟಕ್ಕೆ ವಿಸ್ತರಿಸಲಿದೆ. 

 

ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಪ್ರಮುಖ ರಸ್ತೆಗಳ ಸಂಪರ್ಕ ಸುಲಭವಾಗುವುದಲ್ಲದೆ ಪುತ್ತೂರು, ಸುಬ್ರಹ್ಮಣ್ಯ, ಮಡಿಕೇರಿ ಹಾಗೂ ಮಂಗಳೂರು ನಗರಗಳ ಸಂಪರ್ಕ ಕೂಡ ಸುಗಮವಾಗಲಿದೆ.

 

ಈ ಕಾರ್ಯಕ್ರಮದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ, ಪಂಚಾಯತ್ ಅಧ್ಯಕ್ಷರು, ಅಧಿಕಾರಿಗಳು, ಬಿಜೆಪಿ ಮುಖಂಡರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.