ವಿದ್ಯಾರ್ಥಿಯ ಧಾರ್ಮಿಕ ಸ್ವಾತಂತ್ರ್ಯ ಹರಣ; ಹಿಂದೂ ಧರ್ಮಕ್ಕೆ ಕಾಂಗ್ರೆಸ್ ಸರಕಾರದಿಂದ ತೀವ್ರ ಅಪಮಾನ - ಸಂಸದ ಕ್ಯಾ. ಬ್ರಿಜೇಶ್ ಚೌಟ ಖಂಡನೆ!

  • 22 Apr 2025 09:14:43 PM


ಮಂಗಳೂರು: ಕರ್ನಾಟಕದಲ್ಲಿ ಶಾಂತಿ ಮತ್ತು ಸಹನಶೀಲತೆಯನ್ನು ನಾಶಮಾಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಹಿಂದೂ ಸಂಪ್ರದಾಯದ ಮೇಲೆ ನಿರಂತರವಾಗಿ ಅಟ್ಟಹಾಸ ನಡೆಸುತ್ತಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. 

 

ಸಿಇಟಿ ಪರೀಕ್ಷೆಗೆ ಹಾಜರಾಗಲು ಬಂದ ವಿದ್ಯಾರ್ಥಿಯ ಯಜ್ಞೋಪವೀತ (ಜನಿವಾರ)ವನ್ನು ಬಲವಂತವಾಗಿ ತೆಗೆಯಲು ಹೇಳಿ ಮಾಡಿದ ಹೀನ ಘಟನೆಯು ಪವಿತ್ರ ಸಂಸ್ಕಾರಕ್ಕೆ ಅವಮಾನವಾಗಿದ್ದು, ಈ ಅಮಾನವೀಯ ಕೃತ್ಯದಿಂದ ವಿದ್ಯಾರ್ಥಿಯ ಭವಿಷ್ಯವನ್ನೇ ಅಪಾಯಕ್ಕೆ ಒಳಪಡಿಸಿದೆ.

 

 ಕೆವಿಪಿಎಸ್ ಅಧಿಕಾರಿಗಳು ನಡೆಸಿದ ಈ ಕಾರ್ಯವು ತೀವ್ರವಾಗಿ ಖಂಡನೀಯವಾದುದು ಎಂದು ಅವರು ಹೇಳಿದ್ದಾರೆ.

 

ಜನಿವಾರ ಕೇವಲ ದಾರವಲ್ಲ – ಅದು ಜ್ಞಾನ, ಶ್ರದ್ಧೆ ಮತ್ತು ಸಂಸ್ಕಾರದ ಸಂಕೇತ. ಕಾಶಿದಾರ ಮತ್ತು ಗಾಯತ್ರೀ ಮಂತ್ರದ ದೀಕ್ಷೆಯೊಂದಿಗೆ ವಿದ್ಯಾರ್ಥಿಯು ಧರಿಸಿದ್ದ ಜನಿವಾರವನ್ನು ಕತ್ತರಿಸಿ ಅವಮಾನಿಸುತ್ತಾ, ‘ಇದರಲ್ಲಿ ನೇಣು ಹಾಕಿಕೊಳ್ಳಬಹುದು’ ಎಂಬ ಹೀನ ಅಪಹಾಸ್ಯ ಮಾಡಿದ ವರ್ತನೆ, ಬ್ರಾಹ್ಮಣ ಸಮುದಾಯವನ್ನಷ್ಟೇ ಅಲ್ಲ, ಸಮಸ್ತ ಹಿಂದೂಗಳ ಧರ್ಮಾಚರಣೆಯನ್ನೇ ನಿಂದಿಸಿದೆ.

 

 ಪರೀಕ್ಷಾ ನೆಪದಲ್ಲಿ ಮಾಂಗಲ್ಯ ಅಥವಾ ಧಾರ್ಮಿಕ ಚಿಹ್ನೆಗಳನ್ನು ತೆಗೆಸುವುದು ಅಕ್ಷಮ್ಯ ದೌರ್ಜನ್ಯವಾಗಿದೆ ಎಂದೂ ಸರ್ಕಾರದ ಮತಪಾಲಕ ನೀತಿಯು ಇಲ್ಲಿ ಬಹಿರಂಗವಾಗಿದೆ ಎಂದು ಸಂಸದರು ಕಿಡಿಕಾರಿದ್ದಾರೆ.

 

ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶೇ.4 ರಷ್ಟು ಮುಸ್ಲಿಂ ಮೀಸಲಾತಿ, ಜಾತಿ ಗಣನೆಯಲ್ಲಿ ತಾರತಮ್ಯ, ಮತ್ತು ಜನಿವಾರ ಘಟನೆಗಳಂತಹ ನಿರ್ಧಾರಗಳ ಮೂಲಕ ಒಂದು ಧರ್ಮವನ್ನೇ ಓಲೈಸುವ ಅಪಾಯಕಾರಿ ರಾಜಕೀಯ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.

 

ಈ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಂಡು, ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗೆ ನ್ಯಾಯ ಒದಗಿಸಬೇಕು. ಜೊತೆಗೆ, ಧರ್ಮದ ಭಾವನೆಗೆ ಗಾಯ ಮಾಡಿದ ಸರ್ಕಾರ, ತಕ್ಷಣ ರಾಜ್ಯದ ಜನತೆಯ ಎದುರು ಕ್ಷಮೆ ಕೋರಬೇಕೆಂದು ಸಂಸದ ಚೌಟ ಅವರು ಆಗ್ರಹಿಸಿದ್ದಾರೆ.