ಮಂಗಳೂರು: ಕೆಎಸ್ಆರ್ಟಿಸಿ ಬಸ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ಕಂಡಕ್ಟರ್ ವಿರುದ್ಧ ಎಫ್‌ಐಆರ್; ಸೇವೆಯಿಂದ ಅಮಾನತು!

  • 25 Apr 2025 05:11:41 PM

ಮಂಗಳೂರು: ಕೆಎಸ್‌ಆರ್‌ಟಿಸಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಕಂಡಕ್ಟರ್‌ ಮಹಿಳಾ ಪ್ರಯಾಣಿಕೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ನಡುವೆ, ಈ ಘಟನೆ ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

 

 ಏಪ್ರಿಲ್ 22ರಂದು ಮುಡಿಪುವಿನಿಂದ ಸ್ಟೇಟ್ ಬ್ಯಾಂಕ್‌ಗೆ ತೆರಳುತ್ತಿದ್ದ ಬಸ್‌ನಲ್ಲಿ ಈ ಘಟನೆ ಸಂಭವಿಸಿದ್ದು, ಬಸ್‌ನಲ್ಲಿ ಮಹಿಳೆಯರಿಗಾಗಿ ಮೀಸಲಿಟ್ಟಿದ್ದ ಸೀಟಿನಲ್ಲಿ ಕುಳಿತ ಇಬ್ಬರು ಯುವತಿಯರಲ್ಲಿ ಒಬ್ಬರು ಪ್ರಯಾಣದ ವೇಳೆ ಮಲಗಿದ್ದ ಸಂದರ್ಭದಲ್ಲಿ ನಿರ್ವಾಹಕನು ಅವಳಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.

 

ಈ ದೃಶ್ಯವನ್ನು ಬಸ್‌ನಲ್ಲಿದ್ದ ಮತ್ತೊಬ್ಬ ಸಹ ಪ್ರಯಾಣಿಕರು ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಹಿಡಿದು ನಂತರ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

 

ಈ ವಿಡಿಯೋವು ಸಾಮಾಜಿಕ ಮಾಧ್ಯಮಗಳಲ್ಲಿ ವೆಗವಾಗಿ ವೈರಲ್‌ ಆಗಿದ್ದು, ಸಾರ್ವಜನಿಕರು ಹಾಗೂ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

 

 ವಿಡಿಯೋ ವೈರಲ್ ಆಗುತ್ತಿದ್ದಂತೆ ಕೊಣಾಜೆ ಪೊಲೀಸರು ಆರೋಪಿಯನ್ನು ಗುರುತಿಸಿ ಬಂಧಿಸಿದ್ದಾರೆ. ಬಂಧಿತನನ್ನು ಬಾಗಲಕೋಟೆಯ ಮೂಲದ ಪ್ರದೀಪ್ ಕಾಶಪ್ಪ ನಾಯ್ಕರ್ (35) ಎಂದು ಗುರುತಿಸಲಾಗಿದೆ.

 

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಕ್ಷಣವೇ ಪ್ರಕರಣದ ತನಿಖೆಗೆ ಆದೇಶಿಸಿದ್ದು, ಆರೋಪಿಯನ್ನು ಸೇವೆಯಿಂದ ವಜಾಗೊಳಿಸುವಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದಾರೆ.

 

ಈ ಘಟನೆಗೆ ಸಂಬಂಧಿಸಿದಂತೆ, ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 74 ಮತ್ತು 75 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. 

 

ಪ್ರತಿಯೊಬ್ಬ ಮಹಿಳಾ ಪ್ರಯಾಣಿಕರಿಗೂ ಗೌರವ ನೀಡಬೇಕು, ಇಂತಹ ದುಷ್ಕೃತ್ಯಗಳಿಗೆ ಕೆಎಸ್‌ಆರ್‌ಟಿಸಿಯಲ್ಲಿ ಎಡೆ ಇಲ್ಲ, ಎಂಬ ಕಟ್ಟುನಿಟ್ಟಾದ ಸಂದೇಶವನ್ನು ಸಚಿವರು ನೀಡಿದ್ದಾರೆ.