ಮಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಸಮರ್ಥಿಸಿದಂತೆ ತೋರುವ ಪೋಸ್ಟ್‌ನ್ನು ಪ್ರಕಟಿಸಿದ್ದ 'ನಿಚ್ಚು ಮಂಗಳೂರು' ಎಂಬ ಫೇಸ್‌ಬುಕ್ ಪುಟದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಉಳ್ಳಾಲದ ಸತೀಶ್ ಕುಮಾರ್ ಎಂಬುವವರು ನೀಡಿದ ದೂರಿನಂತೆ, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 192 ಹಾಗೂ 353(1)(ಬಿ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಆರೋಪಿಯು ಕೊಣಾಜೆ ಠಾಣಾ ವ್ಯಾಪ್ತಿಯವನೆಂಬ ಅನುಮಾನ ವ್ಯಕ್ತವಾಗಿದ್ದು, ಫೇಸ್‌ಬುಕ್ ಪುಟದ ಡಿಪಿಯಲ್ಲಿರುವ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಪೊಲೀಸರು ಆರಂಭಿಸಿದ್ದಾರೆ.
ವಿವಾದಿತ ಪೋಸ್ಟ್‌ನಲ್ಲಿ, “2023ರಲ್ಲಿ ಪಾಲ್ಗರ್‌ನಲ್ಲಿ ಮೂವರು ಮುಸ್ಲಿಮರನ್ನು ಹತ್ಯೆಗೊಳಿಸಲಾಯಿತು, ಆದರೆ ಆರೋಪಿಗೆ ಸಮರ್ಪಕ ಶಿಕ್ಷೆ ಆಗಲಿಲ್ಲ. ಇದಕ್ಕೆ ಪ್ರತೀಕಾರವಾಗಿ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿದ್ದಾರೆ” ಎಂಬ ಈ ಹೇಳಿಕೆಯ ಮೂಲಕ ಹಾಕಿದ ಪೋಸ್ಟ್ ಪಹಲ್ಗಾಮ್ ಉಗ್ರದಾಳಿಗೆ ಧಾರ್ಮಿಕ ನೆಲೆ ನೀಡಿದಂತೆ ಭಾಸವಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವಿರೋಧವನ್ನು ಎದ್ದುಕೊಂಡಿದೆ.
ಈ ಘಟನೆಯು ಸಾಮಾನ್ಯ ಜನರಲ್ಲಿ ಆಕ್ರೋಶವನ್ನು ಉಂಟು ಮಾಡಿದ್ದು , ಪೋಸ್ಟ್ ಮಾಡುವ ಮೂಲಕ ಉಗ್ರತೆಗೆ ಬೆಂಬಲ ನೀಡಿದ ಆರೋಪಿಯ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ
ಈ ಸಂಬಂಧ ಪೊಲೀಸ್ ತನಿಖೆ ಮುಂದುವರೆದಿದ್ದು, ‘ನಿಚ್ಚು ಮಂಗಳೂರು’ ಪುಟದ ನಿರ್ವಹಕರನ್ನು ಪತ್ತೆಹಚ್ಚಲು ಕಾರ್ಯಚಟುವಟಿಕೆ ನಡೆಯುತ್ತಿದೆ.