ಮಂಡ್ಯ: ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಹಿಡಿದ ದಾರುಣ ಘಟನೆ ಮಂಡ್ಯದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಕೆಲವೇ ಕ್ಷಣಗಳಲ್ಲಿ ಬಸ್ ಸಂಪೂರ್ಣವಾಗಿ ಧಗಧಗನೆ ಹೊತ್ತಿ ಉರಿದಿದ್ದು ಅದೃಷ್ಟವಶಾತ್ ಬಸ್ಸಿನಲ್ಲಿದ್ದ 25 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆಯು ಮಂಡ್ಯದ ನಾಗಮಂಗಲ ತಾಲೂಕಿನ ಕದಬಹಳ್ಳಿ ಬಳಿ ಇಂದು ಮುಂಜಾನೆ ಸಂಭವಿಸಿದೆ.
ಬೆಳಗಿನ ಜಾವ 5 ಗಂಟೆ ಸಮಯದಲ್ಲಿ ಉಡುಪಿಯಿಂದ ಬೆಂಗಳೂರಿನತ್ತ ಹೊರಟಿದ್ದ ಖಾಸಗಿ ಬಸ್, ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಸಾಗುತ್ತಿತ್ತು. ಈ ವೇಳೆ ಕದಬಹಳ್ಳಿ ಸಮೀಪ ಬಸ್‌ನಲ್ಲಿ ಒಂದೇ ಸಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಬಸ್ ಚಾಲಕನು ಸಮಯಪ್ರಜ್ಞೆ ಮತ್ತು ಬುದ್ಧಿವಂತಿಕೆಯಿಂದ ಕಾರ್ಯನಿರ್ವಹಿಸಿ, ಬಸ್ ನಲ್ಲಿದ್ದ ಪ್ರಯಾಣಿಕರಿಗೆ ತಮ್ಮ ಲಗೇಜ್ ಸಹಿತ ಬಸ್ಸಿನಿಂದ ಇಳಿಯುವಂತೆ ಸೂಚನೆ ನೀಡಿದನು.
ಎಲ್ಲ ಪ್ರಯಾಣಿಕರೂ ಬಸ್‌ನಿಂದ ಸುರಕ್ಷಿತವಾಗಿ ಕೆಳಗೆ ಇಳಿದರು.
ಅಂತರದಲ್ಲಿಯೇ ಬಸ್‌ನಲ್ಲಿ ಬೆಂಕಿಯ ತೀವ್ರತೆ ಹೆಚ್ಚಾಗಿ, ನೋಡು ನೋಡುತ್ತಿದ್ದಂತೆ ಅದು ಸಂಪೂರ್ಣವಾಗಿ ಹೊತ್ತಿ ಉರಿಯ ತೊಡಗಿತ್ತು. ಈ ಘಟನೆ ಸಂಬಂಧ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.
ಈ ಅವಘಡಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯ ಕುರಿತು ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.