ಮಂಗಳೂರು: ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಎಲ್ಲಾ ದೇಶವಾಸಿಗಳು ಒಗ್ಗಟ್ಟಿನಿಂದ ಅವರ ಉಗ್ರತೆಗೆ ತಕ್ಕ ಪ್ರತಿಕ್ರಿಯೆ ನೀಡುತ್ತಿರುವ ಈ ಸಂದರ್ಭದಲ್ಲಿ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ 'ಪಾಕಿಸ್ತಾನದ ಜೊತೆ ಯುದ್ಧ ಸಾರುವ ಅಗತ್ಯವಿಲ್ಲ' ಎಂಬ ಹೇಳಿಕೆಯನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತೀವ್ರವಾಗಿ ಖಂಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ನೀಡಿರುವ ಈ ಬಗೆಯ ರಾಜಕೀಯ ಗಂಭೀರತೆಯ ಕೊರತೆ ಮತ್ತು ಸಂವೇದನೆ ರಹಿತ ಹೇಳಿಕೆ, ರಾಷ್ಟ್ರದ ಭದ್ರತೆಗೆ ಅವಮಾನವನ್ನು ಉಂಟುಮಾಡಿದೆ ಎಂದು ಅವರು ಕಿಡಿಕಾರಿದ್ದಾರೆ.
ಪಹಲ್ಗಾಮ್ ನಲ್ಲಿ ನಡೆದ ದಾಳಿಯಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿಯ ಶೌರ್ಯವನ್ನು ಬೆಂಬಲಿಸುವ ಬದಲು, ಸಿಎಂ ಸಿದ್ದರಾಮಯ್ಯ ಅವರು ನೀಡಿರುವ ಪ್ರತಿಕ್ರಿಯೆಯು ಯೋಧರ ತ್ಯಾಗದ ಮಹತ್ವವನ್ನು ತಗ್ಗಿಸುವಂತಹ ನಡವಳಿಕೆಯಾಗಿದೆ ಎಂದು ಸಂಸದ ಚೌಟ ಆಕ್ರೋಶ ವ್ಯಕ್ತಪಡಿಸಿದ್ದಾರೆ
.ಪುಲ್ವಾಮವಿರಲಿ ಪಹಲ್ಗಾಮ್ ಆಗಿರಲಿ, ಇಂತಹ ಘಟನೆಗಳನ್ನು ಕೇವಲ ಗುಪ್ತಚರ ವೈಫಲ್ಯವೆಂದು ಹೇಳುವುದು ಯೋಧರ ಸರ್ವೋಚ್ಚ ಬಲಿದಾನಕ್ಕೆ ನೀಡುವ ಅಗೌರವ," ಎಂದು ಅವರು ಹೇಳಿದ್ದಾರೆ.
ಪಹಲ್ಗಾಮ್ ದಾಳಿಯಂತಹ ಭಯೋತ್ಪಾದಕ ಕೃತ್ಯಗಳನ್ನು ಜಗತ್ತೇ ಖಂಡಿಸುತ್ತಿರುವಾಗ, ಕಾಂಗ್ರೆಸ್ ನಾಯಕರಿಗೆ ಮಾತ್ರ ಸಡಿಲ ಮಾತುಗಳ ಅಭ್ಯಾಸ ಉಳಿದಿದ್ದು ವಿಷಾದನೀಯ ಎಂದು ಸಂಸದರು ಟೀಕಿಸಿದರು.
ಮೂಲಭೂತವಾದಿ ಚಟುವಟಿಕೆಗಳು ವೃದ್ಧಿಸುತ್ತಿರುವುದಕ್ಕೆ, ಕಾಂಗ್ರೆಸ್ ಪಕ್ಷದ ದಶಕಗಳಿಂದಲೂ ಹಾಲಿಸಿದ ಓಲೈಕೆ ಮತ್ತು ಒಡೆದು ಆಳುವ ನೀತಿಯೇ ಕಾರಣವೆಂದು ಚೌಟ ಅವರು ವಾದಿಸಿದರು.
ಸಿದ್ದರಾಮಯ್ಯನವರ ಪಾಕಿಸ್ತಾನದ ವಿರುದ್ಧ ಮೃದು ನಿಲುವನ್ನು ಪ್ರಶ್ನಿಸಿದ ಅವರು, "ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಪತ್ತೆಯಾದ ಉಗ್ರ ಚಟುವಟಿಕೆಗಳ ಹೊಣೆ ಯಾರು?" ಎಂದು ತೀವ್ರವಾಗಿ ಪ್ರಶ್ನಿಸಿದ್ದಾರೆ?
ಕೇಂದ್ರ ಸರ್ಕಾರ ಪಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ನೆರವು ನೀಡಲು ತಕ್ಷಣ ಕ್ರಮಕೈಗೊಂಡಿರುವಾಗ, ಕಾಂಗ್ರೆಸ್ ಪಕ್ಷ ಕೀಳು ಮಟ್ಟದ ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡುತ್ತಿರುವುದು ಅಮಾನವೀಯ ಎಂದು ಕ್ಯಾ. ಚೌಟ ಆಕ್ರೋಶ ವ್ಯಕ್ತಪಡಿಸಿದರು.
ಭದ್ರತಾ ಪಡೆಗಳಿದ್ದಿಲ್ಲ ಎಂಬ ಸುಳ್ಳು ಸುದ್ದಿ ಹಬ್ಬಿಸುವುದು ಅಥವಾ ದಾಳಿಯನ್ನು ಗುಪ್ತಚರ ವೈಫಲ್ಯವೆಂದು ಲಘೂಕರಣ ಮಾಡುವ ಪ್ರಯತ್ನ ಜನರ ಮನೋಸ್ಥೈರ್ಯವನ್ನು ಕುಗ್ಗಿಸಲು ಹೊರಟ ದುರುದ್ದೇಶಿತ ನಡವಳಿಕೆ ಎಂದು ಅವರು ಅಭಿಪ್ರಾಯಪಟ್ಟರು.
"ಭಾರತೀಯರು ಈ ಬಗೆಯ ನಡವಳಿಕೆಯನ್ನು ಖಂಡಿಸಬೇಕು ಮತ್ತು ಬಲವಾಗಿ ತಿರಸ್ಕರಿಸಬೇಕು," ಎಂಬುದಾಗಿ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಚೌಟ ತಿಳಿಸಿದ್ದಾರೆ.