ಮಂಗಳೂರು : ನಗರ ಹೊರವಲಯ ಕುಡುಪು ಬಳಿ ಅಪರಿಚಿತ ಯುವಕನ ಮೃತದೇಹ ಪತ್ತೆ: ಕಲ್ಲಿನಿಂದ ಜಜ್ಜಿ ಹತ್ಯೆಯ ಶಂಕೆ!

  • 28 Apr 2025 02:54:41 PM

ಮಂಗಳೂರು: ನಗರದ ಹೊರವಲಯ ಕುಡುಪು ಸಮೀಪ ರವಿವಾರ ಸಂಜೆ ಅಪರಿಚಿತ ಯುವಕನ ಮೃತದೇಹ ಪತ್ತೆಯಾಗಿದೆ.

ಅಪರಿಚಿತ ಯುವಕನ ಮೃತ ದೇಹವು ಕಲ್ಲಿನಿಂದ ಜಜ್ಜಿ ಕೊಲೆಗೈಯಲಾಗಿತ್ತು ಎಂಬ ಶಂಕೆ ಮೂಡಿಸಿದೆ.

 

 ಸುಮಾರು 35ರಿಂದ 40 ವರ್ಷದ ಪ್ರಾಯದ ಉತ್ತರ ಭಾರತ ಮೂಲದ ವ್ಯಕ್ತಿ ಎನ್ನಲಾಗಿದೆ. ಸಾವಿನ ಕುರಿತು ಸ್ಥಳೀಯರು ಹಾಗೂ ಅಧಿಕಾರಿಗಳಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.

 

 ಕುಡುಪು ಕಟ್ಟೆಯ ಸಮೀಪದ ಗದ್ದೆಯಲ್ಲಿ 6 ತಂಡಗಳ ಕ್ರಿಕೆಟ್ ಪಂದ್ಯಾವಳಿ ನಡೆದಿದ್ದು ಆಯಾ ವೇಳೆ ಅಪರಿಚಿತ ಯುವಕನು ಮೈದಾನಕ್ಕೆ ಬಂದು, ಆಟಗಾರರೊಂದಿಗೆ ಮಾತಿಗೆ ಮಾತು ಬೆಳೆದ ಘಟನೆ ಸಂಭವಿಸಿದೆ ಎಂದೂ ನಂತರ ಆಕ್ರೋಶಗೊಂಡ ಆಟಗಾರರ ಗುಂಪು ಯುವಕನ ಮೇಲೆ ಹಲ್ಲೆ ನಡೆಸಿದ ಶಂಕೆ ಇದ್ದು, ಗಂಭೀರವಾಗಿ ಗಾಯಗೊಂಡ ಯುವಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 

ಘಟನೆಸ್ಥಳಕ್ಕೆ ನಗರ ಉಪ ಆಯುಕ್ತ ಸಿದ್ದಾರ್ಥ್ ಗೋಯಲ್, ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಧನ್ಯಾ ನಾಯಕ್ ಹಾಗೂ ಮಂಗಳೂರು ಗ್ರಾಮಾಂತರ ಠಾಣಾ ಇನ್‌ಸ್ಪೆಕ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

 

ಹತ್ಯೆಯ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಮೃತ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ; ಇದಕ್ಕಾಗಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. 

 

ಇದರ ಕುರಿತಾಗಿ ಬರುವಂತಹ ವಿವಿಧ ವದಂತಿಗಳಿಗೆ ಕಿವಿಗೊಡಬೇಡಿ ಎಂಬುದಾಗಿ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮನವಿ ಮಾಡಿ ಕೊಂಡಿದ್ದಾರೆ.