ನವ ದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯ ಬಳಿಕ ಕೇಂದ್ರ ಸರ್ಕಾರವು ಪಾಕಿಸ್ತಾನಿ ಪ್ರಜೆಗಳಿಗೆ ಭಾರತವನ್ನು ತಕ್ಷಣ ತೊರೆಯುವಂತೆ ಆದೇಶ ನೀಡಿತ್ತು.
ಸಾರ್ಕ್ ವೀಸಾ ಹೊಂದಿರುವ ಪಾಕಿಸ್ತಾನಿ ಪ್ರಜೆಗಳು ಏಪ್ರಿಲ್ 26ರ ಒಳಗೆ ಮತ್ತು ವೈದ್ಯಕೀಯ ವೀಸಾ ಹೊಂದಿರುವವರು ಏಪ್ರಿಲ್ 29ರೊಳಗೆ ಭಾರತ ತೊರೆಯಬೇಕು ಎಂಬುದಾಗಿ ಸರ್ಕಾರ ಸ್ಪಷ್ಟ ಸೂಚನೆ ನೀಡಿತ್ತು.
ವ್ಯವಹಾರ, ಪ್ರವಾಸ, ಚಲನಚಿತ್ರ, ಪತ್ರಕರ್ತ, ಸಾರಿಗೆ, ಸಮ್ಮೇಳನ, ಪರ್ವತಾರೋಹಣ, ವಿದ್ಯಾರ್ಥಿ, ಸಂದರ್ಶಕ ಮತ್ತು ಯಾತ್ರಿಗಳ ವೀಸಾ ವಿಭಾಗಗಳಿಗೆ ಈ ನಿಯಮ ಅನ್ವಯಿಸಿತ್ತು.
ನೀಡಿರುವ ಗಡುವಿನೊಳಗೆ ಭಾರತವನ್ನು ತೊರೆಯದೆ ಇದ್ದ ಬಾಕಿ ಉಳಿದ ಪಾಕಿಸ್ತಾನಿ ಪ್ರಜೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಸಜ್ಜಾಗಿದೆ.
ವಲಸೆ ಮತ್ತು ವಿದೇಶಿಯರ ಕಾಯ್ದೆ 2025ರ ಅಡಿ, ಅವರು ಬಂಧನಕ್ಕೆ ಒಳಪಡುವ ಸಂಭವವಿದ್ದು, 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 3 ಲಕ್ಷ ರೂ. ದಂಡ ಅಥವಾ ಎರಡೂ ವಿಧಿಸಲಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಎಚ್ಚರಿಕೆಯನ್ನು ನೀಡಿದೆ.
ಈ ಕ್ರಮವು ದೇಶದ ಭದ್ರತೆ ಮತ್ತು ಸಾರ್ವಜನಿಕ ಶಾಂತಿಗಾಗಿ ಅನಿವಾರ್ಯವಾಗಿದೆ ಎಂದು ಸರ್ಕಾರ ಸ್ಪಷ್ಟೀಕರಿಸಿದೆ.
ನಿಯಮ ಉಲ್ಲಂಘಿಸುವವರ ವಿರುದ್ಧ ಯಾವ ರೀತಿಯ ಸಹಿಷ್ಣುತೆ ತೋರಿಸಲಾಗದು ಎಂದು ಎಚ್ಚರಿಕೆ ನೀಡಿದೆ. ಗಡುವಿನ ನಂತರ ಸಹ ಭಾರತದಲ್ಲಿ ಉಳಿದಿರುವ ಪಾಕಿಸ್ತಾನಿ ಪ್ರಜೆಗಳಿಗೆ ಈಗ ಕಾನೂನು ಕ್ರಮ ತಪ್ಪಡು ಎಂದು ಸೂಚಿಸಿದೆ.