ದೆಹಲಿಯಲ್ಲಿ ಇಸ್ರೇಲ್ ರಾಯಭಾರಿಯನ್ನು ಭೇಟಿಯಾದ ಸಂಸದ ಚೌಟ – ದ.ಕ. ಕೃಷಿಗೆ ಇಸ್ರೇಲ್ ಮಾದರಿಯ ತಂತ್ರಜ್ಞಾನಗಳ ಅಳವಡಿಕೆಯ ಪ್ರಸ್ತಾಪ!

  • 30 Apr 2025 12:26:24 PM

ನವದೆಹಲಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಸ್ರೇಲ್ ಮಾದರಿಯ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿ ಸುಸ್ಥಿರ ಕೃಷಿಯನ್ನು ಹಮ್ಮಿಕೊಳ್ಳುವ ಮಹತ್ವದ ಪ್ರಯತ್ನಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಚಾಲನೆ ನೀಡಿದ್ದಾರೆ. 

 

ಈ ನಿಟ್ಟಿನಲ್ಲಿ ಅವರು ನವದೆಹಲಿಯಲ್ಲಿ ಇಸ್ರೇಲ್‌ನ ರಾಯಭಾರಿ ರಿಯೂವೆನ್ ಅಜಾರ್ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ.

 

ಸಂಸದರು ಜಿಲ್ಲೆಯ ಕೃಷಿ ಅಭಿವೃದ್ಧಿಗೆ ದಿಟ್ಟ ದಿಶೆಯೊಂದನ್ನು ರೂಪಿಸುವ ದೃಷ್ಟಿಯಿಂದ, ಸ್ಥಳೀಯ ಪರಿಸ್ಥಿತಿಗೆ ತಕ್ಕಂತೆ ಇಸ್ರೇಲ್‌ನ ತಂತ್ರಜ್ಞಾನಗಳಾದ ರೊಬೊಟಿಕ್ಸ್, ಡ್ರೋನ್, ಎಐ ಆಧಾರಿತ ನಿರ್ವಹಣಾ ವಿಧಾನಗಳು ಹಾಗೂ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದ ನೀರಾವರಿ ತಂತ್ರಗಳನ್ನು ಅಳವಡಿಸಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. 

 

 

ಅಡಿಕೆ, ತೆಂಗು, ಗೋಡಂಬಿ, ರಬ್ಬರ್ ಮುಂತಾದ ರಫ್ತು-ಆಧಾರಿತ ಬೆಳೆಗಳ ಉತ್ಪಾದನೆಯಲ್ಲಿಯೂ ತಂತ್ರಜ್ಞಾನ ಬಳಸುವುದರಿಂದ ವಾಣಿಜ್ಯ ಕೃಷಿಗೆ ಹೊಸ ಬಾಗಿಲುಗಳು ತೆರೆಯಲಿವೆ. ಇದರೊಂದಿಗೆ, ಜಿಲ್ಲೆಯ ಹವಾಮಾನಕ್ಕೆ ಅನುಗುಣವಾಗಿ ಕಾಫಿ ಬೆಳೆಯನ್ನೂ ಹೊಸ ಆಯಾಮದಲ್ಲಿ ಬೆಳೆಸಲು ತಂತ್ರಜ್ಞಾನ ಸಹಕಾರ ಅಗತ್ಯವಿದೆ ಅವರು ಹೇಳಿದ್ದಾರೆ.

 

ಸಂಸದ ಚೌಟ ಅವರು ಇಸ್ರೇಲ್‌ನ ಕೃಷಿ ತಂತ್ರಜ್ಞಾನ ಕಂಪನಿಗಳು ಮತ್ತು ನಿಯೋಗಗಳನ್ನು ನೇರವಾಗಿ ಜಿಲ್ಲೆಯ ರೈತರೊಂದಿಗೆ ಸಂಪರ್ಕ ಸಾಧಿಸಲು ಆಹ್ವಾನಿಸಿದರು. ಇದರಿಂದ ತಾತ್ಕಾಲಿಕ ಯೋಜನೆಗಿಂತ ಮುಂದೆ ಸಾಗಿದಂತೆ, ಪ್ರಾಯೋಗಿಕ ಮತ್ತು ನೇರ ಪ್ರಯೋಜನಗಳೂ ಲಭಿಸುತ್ತವೆ ಎಂದು ಅವರು ವ್ಯಕ್ತಪಡಿಸಿದರು.

 

ರಾಯಭಾರಿ ಅಜಾರ್ ಅವರು ಈ ಪ್ರಸ್ತಾಪವನ್ನು ಸ್ವಾಗತಿಸಿ, ಭಾರತದಲ್ಲಿ ತಂತ್ರಜ್ಞಾನ ಆಧಾರಿತ ಕೃಷಿಗೆ ಇಸ್ರೇಲ್ ಸದಾ ಬೆಂಬಲ ನೀಡಲು ಸಿದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.

 

 ಈ ಪ್ರಸ್ತಾಪದಿಂದ ಭಾರತ-ಇಸ್ರೇಲ್ ಸಂಬಂಧಗಳು ತಳಮಟ್ಟದಲ್ಲಿ ಮತ್ತಷ್ಟು ಬಲಗೊಳ್ಳಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ಭವಿಷ್ಯಕ್ಕೆ ಇದು ಮಹತ್ವದ ಹೆಜ್ಜೆ ಆಗಲಿದೆ ಎಂದು ಸಂಸದರು ವಿಶ್ಲೇಷಿಸಿದರು.