ಕೊಟ್ಟಾಯಂ: ಭಾರತದ ಹಿರಿಯ ಶೂಟಿಂಗ್ ತರಬೇತುದಾರರಾದ ಸನ್ನಿ ಥಾಮಸ್ (84) ಅವರು ಬುಧವಾರ ಕೊಟ್ಟಾಯಂನಲ್ಲಿ ಹೃದಯಾಘಾತದಿಂದ ನಿಧನರಾದರು.
ಪತ್ನಿ ಕೆಜೆ ಜೋಸಮ್ಮ, ಪುತ್ರರು ಮನೋಜ್, ಸನಿಲ್ ಮತ್ತು ಪುತ್ರಿ ಸೋನಿಯಾ ಅವರನ್ನು ಮತ್ತು ಬಂಧು ಮಿತ್ರರನ್ನು ಅವರು ಅಗಲಿದ್ದಾರೆ. ಅವರ ನಿಧನದಿಂದ ಕ್ರೀಡಾ ಲೋಕಕ್ಕೆ ಅಪಾರ ನಷ್ಟ ಸಂಭವಿಸಿದೆ.
ಸನ್ನಿ ಥಾಮಸ್ ಅವರು 1993 ರಿಂದ 2012 ರವರೆಗೆ ಭಾರತೀಯ ಶೂಟಿಂಗ್ ತಂಡದ ಮುಖ್ಯ ತರಬೇತುದಾರರಾಗಿದ್ದರು. ಈ ಅವಧಿಯಲ್ಲಿ ಭಾರತ ಶೂಟಿಂಗ್‌ನಲ್ಲಿ ನೂರಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪದಕಗಳನ್ನು ತನ್ನದಾಗಿಸಿ ಕೊಂಡಿತ್ತು.
ಅವರು ಒಲಿಂಪಿಕ್ ಚಿನ್ನದ ವಿಜೇತ ಅಭಿನವ್ ಬಿಂದ್ರಾ ಅವರಿಗೆ ತರಬೇತಿ ನೀಡಿದ್ದರು ಅವರು ಸ್ವತಃ ರಾಷ್ಟ್ರೀಯ ಚಾಂಪಿಯನ್ ಆಗಿದ್ದರೂ, ತಮ್ಮ ಜೀವನವನ್ನು ತರಬೇತಿಗೆ ಅರ್ಪಿಸಿದವರು.
ಶಿಕ್ಷಕರಾಗಿ ಉಳವೂರಿನ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದ್ದ ಅವರು, ನಿವೃತ್ತಿಯಾದ ಬಳಿಕ ಶೂಟಿಂಗ್ ಕ್ಷೇತ್ರಕ್ಕೆ ತೊಡಗಿಸಿಕೊಂಡರು. ಈ ಸೇವೆಯ ಗುರುತಾಗಿ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ಲಭಿಸಿತು.
ಅವರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ 12ಕ್ಕೆ ಎಡಪ್ಪಳ್ಳಿಯ ತೇವಕ್ಕಲ್‌ನ ಚರ್ಚ್‌ನಲ್ಲಿ ನಡೆಯಲಿದೆ.
ಇಂದು ಮಧ್ಯಾಹ್ನ 3 ರಿಂದ ಸಂಜೆ 5ರವರೆಗೆ ಕಾಲೇಜಿನಲ್ಲಿ ಹಾಗೂ ನಾಳೆ ಬೆಳಗ್ಗೆ 9 ಗಂಟೆಯವರೆಗೆ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶವಿದೆ.