ಮಂಗಳೂರು: ಉಳ್ಳಾಲ ನೇತ್ರಾವತಿ ಹಳೆಯ ಸೇತುವೆ ಒಂದು ತಿಂಗಳ ಕಾಲ ದುರಸ್ತಿ ಕಾರ್ಯಕ್ಕಾಗಿ ಮುಚ್ಚಲಾಗಿತ್ತು. ಶನಿವಾರ ನಿನ್ನೆ ಬೆಳಿಗ್ಗೆಯಿಂದ ಈ ಸೇತುವೆ ಪುನಃ ವಾಹನ ಸಂಚಾರಕ್ಕೆ ತೆರೆಯಲ್ಪಟ್ಟಿದ್ದು, ಸಾರ್ವಜನಿಕರಲ್ಲಿ ಸ್ವಲ್ಪ ನಿಟ್ಟುಸಿರಿನ ಭಾವನೆ ಉಂಟಾಗಿದೆ.
ದೈನಂದಿನ ಸಂಚಾರ ಮಾಡುವ ಪ್ರಯಾಣಿಕರು ಟ್ರಾಫಿಕ್ ತೊಂದರೆಗಳಿಂದ ಇದೀಗ ಮುಕ್ತರಾಗಿದ್ದಾರೆ.
ಉಳ್ಳಾಲ ಮತ್ತು ಮಂಗಳೂರು ನಡುವಿನ ಸಂಪರ್ಕಕ್ಕೆ ನೇತ್ರಾವತಿಯಲ್ಲಿ ಎರಡು ಸೇತುವೆಗಳಿವೆ. ಅದರಲ್ಲಿ ಹಳೆಯ ಸೇತುವೆಯನ್ನು ಏಪ್ರಿಲ್ 1ರಂದು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ಈ ಅವಧಿಯಲ್ಲಿ ಹೊಸ ಸೇತುವೆಯ ಕೇವಲ ಒಂದು ದಿಕ್ಕಿನ ಲೈನ್ ಮಾತ್ರ ವಾಹನ ಸಂಚಾರಕ್ಕೆ ಲಭ್ಯವಿತ್ತು.
ಇದರ ಪರಿಣಾಮವಾಗಿ ಬೆಳಿಗ್ಗೆ ಮತ್ತು ಸಂಜೆ ತೀವ್ರ ಟ್ರಾಫಿಕ್ ಜಾಮ್‌ನಿಂದ ಪ್ರಯಾಣಿಕರು ಕಂಗೆಟ್ಟಿದ್ದರು.
ಕೇರಳದಿಂದ ಮಂಗಳೂರಿಗೆ ಸಂಚರಿಸುವ ವಾಹನಗಳ ಸಂಖ್ಯೆಯು ಹೆಚ್ಚಾಗಿದ್ದರಿಂದ ಸಂಚಾರ ದಟ್ಟಣೆ ಮತ್ತಷ್ಟು ತೀವ್ರವಾಗಿತ್ತು.
ದುರಸ್ತಿ ಕಾರ್ಯ ಮುಂದುವರಿದಿರುವಾಗ ಸಾರ್ವಜನಿಕರ ಸಹನೆ ಪರೀಕ್ಷೆಯಾಯಿತ್ತೆಂದರೆ ಸುಳ್ಳಾಗದು.
ಈಗ ಎರಡೂ ಸೇತುವೆಗಳು ಪುನಃ ಸಂಚಾರಕ್ಕೆ ಲಭ್ಯವಾಗಿರುವ ಹಿನ್ನೆಲೆಯಲ್ಲಿ, ವಾಹನಗಳ ಸರಾಗ ಸಂಚಾರ ಸಾಧ್ಯವಾಗಿದೆ. ಪ್ರಯಾಣಿಕರು, ಸಾರ್ವಜನಿಕರು ಹಾಗೂ ವಾಹನ ಚಾಲಕರಿಗೆ ಅನುಕೂಲವಾಗಿದ್ದು, ತೊಂದರೆಗಳಿಂದ ಕೆಲ ಮಟ್ಟಿಗೆ ಬಿಡುಗಡೆ ದೊರೆತಂತಾಗಿದೆ.