ಆಟವಾಡುತ್ತಿದ್ದ ವೇಳೆ ಎದೆನೋವು ;16 ವರ್ಷದ ಬಾಲಕ ಹೃದಯಾಘಾತದಿಂದ ಸಾವು!

  • 05 May 2025 02:59:36 PM

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದಲ್ಲಿನ ಗೋವಿಂದ ಗೌಡರ ಪುತ್ರ ಪ್ರಥಮ್ (16) ಎಂಬ ಒಂಭತ್ತನೇ ತರಗತಿ ವಿದ್ಯಾರ್ಥಿ ಮೇ 4ರಂದು ಮಧ್ಯಾಹ್ನ ಹೃದಯಾಘಾತದಿಂದ ಮೃತಪಟ್ಟ ಘಟನೆಯೊಂದು ಸಂಭವಿಸಿದೆ.

 

ಮಧ್ಯಾಹ್ನದ ಸಮಯದಲ್ಲಿ ಮನೆಯ ಸಮೀಪದ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ವೇಳೆಯಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

 

ಮೃತ ಬಾಲಕ ಧರ್ಮಸ್ಥಳದ ಖಾಸಗಿ ಸಂಸ್ಥೆಯಲ್ಲಿನ ಕಾರ್ಮಿಕನ ಮಗನಾಗಿದ್ದು, ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ ತೋರಿಸುತ್ತಿದ್ದ.

 

  ಮುಂದೆ ಹತ್ತನೇ ತರಗತಿಗೆ ಸಿದ್ಧತೆ ನಡೆಸುತ್ತಿದ್ದ ಬಾಲಕನ ಅಕಾಲಿಕ ಮರಣದಿಂದ ಕುಟುಂಬ, ಶಾಲಾ ಶಿಕ್ಷಕರು ಹಾಗೂ ಸ್ನೇಹಿತರು ಗಂಭೀರ ಬೇಸರದಲ್ಲಿದ್ದಾರೆ.

 

ಈ ಘಟನೆ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೈದ್ಯಕೀಯ ಪರೀಕ್ಷೆಯಿಂದ ಮಕ್ಕಳಲ್ಲಿಯೂ ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳ ಬಗ್ಗೆ ಮತ್ತೊಮ್ಮೆ ಚರ್ಚೆ ಶುರುವಾಗಿದ್ದು,

ವೈದ್ಯರು ಮಕ್ಕಳ ಆರೋಗ್ಯದತ್ತ ಹೆಚ್ಚು ಗಮನ ಹರಿಸುವ ಅಗತ್ಯವಿದೆ ಎಂದು ಸಲಹೆ ನೀಡುತ್ತಿದ್ದಾರೆ.