ಭಾರತ-ಪಾಕ್ ನಡುವೆ ಸಂಪೂರ್ಣ ಕದನ ವಿರಾಮಕ್ಕೆ ಒಪ್ಪಂದ!;ಕದನ ವಿರಾಮದ ಅಂತ್ಯವೋ? ಅಥವಾ ಇತಿಹಾಸದ ಪುನರಾವೃತಿಯೊ??

  • 10 May 2025 07:20:42 PM


ದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಕದನದ ಪರಿಸ್ಥಿತಿಗೆ ಅಂತ್ಯಕಾಣಿಸಿರುವ ಉತ್ತಮ ಸುದ್ದಿ ಇದೀಗ ಹೊರಬಿದ್ದಿದೆ. 

 

ಭಾರತ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ನೀಡಿದ ಮಾಹಿತಿ ಪ್ರಕಾರ, ಇಂದು ಸಂಜೆ 5 ಗಂಟೆಯಿಂದ ಕದನ ವಿರಾಮ ಅಧಿಕೃತವಾಗಿ ಜಾರಿಗೆ ಬರುತ್ತಿದೆ. ಈ ನಿರ್ಧಾರವು ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳ ನಡುವೆ ನೇರವಾಗಿ ನಡೆದ ಮಾತುಕತೆಯ ಫಲವಾಗಿ ಆಗಿದೆ ಎಂದು ವಿಕ್ರಮ್ ಮಿಶ್ರಿ ಅವರು ಹೇಳಿದ್ದಾರೆ.

 

ಆದರೆ ಅದಕ್ಕೂ ಮುನ್ನ ಈ ಹೇಳಿಕೆಯನ್ನು, ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಎಕ್ಸ್ ಖಾತೆಯಲ್ಲಿ ಈ ಸುದ್ದಿಯನ್ನು ಬಹಿರಂಗಪಡಿಸಿದ್ದರು.

 

 ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ದೀರ್ಘ ರಾತ್ರಿಯ ಮಾತುಕತೆಗಳ ನಂತರ, ಭಾರತ ಮತ್ತು ಪಾಕಿಸ್ತಾನಗಳು ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅವರು ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿ ತಿಳಿಸಿದ್ದಾರೆ.

 

 ಅವರ ಈ ಪ್ರಕಟಣೆಯ ತಕ್ಷಣವೇ ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ಇಲಾಖೆ ತಲಾ ಕದನ ವಿರಾಮವನ್ನು ದೃಢಪಡಿಸಿದವು.

 

ಈ ಬಳಿಕ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಕೂಡ ಎಕ್ಸ್‌ನಲ್ಲಿ ಪ್ರಕಟಣೆ ನೀಡಿದ್ದು, ಅವರು ಭಾರತ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಜೊತೆ ನಡೆದ ಮಾತುಕತೆಯನ್ನು ಉಲ್ಲೇಖಿಸಿದರು. 

 

ಎರಡೂ ದೇಶಗಳು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅವರು ಟ್ರಂಪ್ ಅವರ ಮಾತುಗಳಿಗೆ ಬೆಂಬಲ ನೀಡಿದರು.