ಕಾಸರಗೋಡು:ಕಾಞಂಗಾಡ್‌ನಲ್ಲಿ ನಕಲಿ ಪ್ರಮಾಣಪತ್ರ ದಂಧೆ ಪತ್ತೆ; ಮೂವರು ಅರೆಸ್ಟ್!

  • 14 May 2025 02:04:37 PM


ಕಾಸರಗೋಡು: ಹೊಸದುರ್ಗ ಪೊಲೀಸರು ಕಾಞಂಗಾಡ್‌ನ ನಕಲಿ ಪ್ರಮಾಣಪತ್ರಗಳನ್ನು ತಯಾರಿಸುತ್ತಿದ್ದ ಮೂವರ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

 

ಈ ಪ್ರಕರಣದಲ್ಲಿ ಕೋವಲ್ ಪಳ್ಳಿಯ ಸಂತೋಷ್ ಕುಮಾರ್ (45), ಕಾಞಂಗಾಡ್ ದಕ್ಷಿಣದ ನಿವಾಸಿ ಪಿ. ರವೀಂದ್ರನ್ (51), ಮತ್ತು ಹೊಸದುರ್ಗ ಬೀಚ್‌ನ ಶಿಹಾಬ್ (34) ಎಂಬವರು ಬಂಧಿತರಾಗಿದ್ದಾರೆ. 

 

ಈ ದಂಧೆ ಕಾಞಂಗಾಡ್ ಪುದಿಯಕೋಟ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ 'ನೆಟ್ ಫಾರ್ ಯು' ಎಂಬ ಸಂಸ್ಥೆಯಲ್ಲಿ ನಡೆಯುತ್ತಿದ್ದು, ಅಲ್ಲಿ ನಕಲಿ ದಾಖಲೆಗಳನ್ನು ತಯಾರಿಸಲು ಕಂಪ್ಯೂಟರ್‌ಗಳು, ಹಾರ್ಡ್ ಡಿಸ್ಕ್‌ಗಳು, ಸೀಲುಗಳು ಸೇರಿದಂತೆ ಹಲವಾರು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

 

ಬಂಧಿತ ಶಿಹಾಬ್ ಅವರ ಮನೆಯಲ್ಲಿ ಶೋಧನೆ ನಡೆಸಿದಾಗ ಪೊಲೀಸರು ನಕಲಿ ಮುದ್ರಣಗಳನ್ನು ವಶಪಡಿಸಿಕೊಂಡಿದ್ದರು.

 

ರವೀಂದ್ರನ್ ಅವರ ನಿವಾಸದಲ್ಲಿಯೂ ತಪಾಸಣೆ ನಡೆದಿದೆ. ಈ ತಂಡವು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಪ್ರಮಾಣಪತ್ರಗಳು, ಪಾಸ್‌ಪೋರ್ಟ್‌ಗಳು, ಚಾಲನಾ ಪರವಾನಗಿಗಳು, ಎಸ್‌ಎಸ್‌ಎಲ್‌ಸಿ ಪುಸ್ತಕಗಳು ಸೇರಿದಂತೆ ನಕಲಿ ದಾಖಲೆಗಳನ್ನು ತಯಾರಿಸಿ ಮಾರಾಟ ಮಾಡುವ ಬೃಹತ್ ದಂಧೆಯಲ್ಲಿ ತೊಡಗಿಸಿಕೊಒಂದಿದ್ದರು ಎಂಬ ಶಂಕೆ ವ್ಯಕ್ತವಾಗಿದೆ.

 

ಈ ಕುರಿತು ತನಿಖೆ ಇನ್ನೂ ಮುಂದುವರೆದಿದ್ದು, ದಂಧೆಯಲ್ಲಿ ಇನ್ನೂ ಹೆಚ್ಚಿನ ಜನರು ಭಾಗಿಯಾಗಿರುವ ಸಾಧ್ಯತೆ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ.