ಮಂಗಳೂರು: ವರ್ಕ್ ಫ್ರಮ್ ಹೋಮ್ ಆಧಾರಿತ ಆನ್‌ಲೈನ್ ಕೆಲಸದ ಜಾಹೀರಾತನ್ನು ನಂಬಿದ ವ್ಯಕ್ತಿಯೊಬ್ಬ 6.50 ಲಕ್ಷ ರೂಪಾಯಿ ಕಳೆದುಕೊಂಡು ಮೋಸ ಹೋಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದೂರುದಾರರು ಇನ್‌ಸ್ಟಾಗ್ರಾಂನಲ್ಲಿ ಕಂಡ ಜಾಹೀರಾತು ಲಿಂಕ್ ಕ್ಲಿಕ್ ಮಾಡಿದಾಗ ಅದು ವಾಟ್ಸ್ಆ್ಯಪ್‌ಗೆ ತಿರುವುಗೊಂಡಿತ್ತು.
ಟೆಲಿಗ್ರಾಂ ಮೂಲಕ ಟಾಸ್ಕ್ ಇದಿದ್ದು ವಾಟ್ಸ್ಆ್ಯಪ್ ಮೂಲಕ ಅಪರಿಚಿತ ವ್ಯಕ್ತಿಯಿಂದ ಲಿಂಕ್ ಬಂದಿದ್ದು ಅದನ್ನು ತೆರೆದು ನೋಂದಣಿ ಮಾಡುವಂತೆ ಸೂಚನೆ ನೀಡಲಾಯಿತು. ಬಳಿಕ ಟೆಲಿಗ್ರಾಂ ಆ್ಯಪ್ ಡೌನ್‌ಲೋಡ್ ಮಾಡಿಸಿ, ಅಖೀಲ್ ಎಂಬ ಹೆಸರಿನ ಖಾತೆಯನ್ನು ಫಾಲೋ ಮಾಡಲು ಸೂಚಿಸಲಾಯಿತು.
ಅಖೀಲ್ ನೀಡಿದ ಮೊದಲ ಐದು ಟಾಸ್ಕ್‌ಗಳಲ್ಲಿ 500 ರೂ. ಹೂಡಿಕೆ ಮಾಡಿದ ದೂರುದಾರರಿಗೆ 2,000 ರೂ. ಲಾಭಾಂಶ ವಾಪಸು ನೀಡಿ ವಿಶ್ವಾಸ ಪಡೆದು ಕೊಂಡರು.
ಲಾಭದ ಆಸೆಯ ಬಲೆಗೆ ಬಿದ್ದು
ಇದನ್ನು ನಂಬಿದ ದೂರುದಾರರು ಹಂತ ಹಂತವಾಗಿ ಒಟ್ಟು 6.50 ಲಕ್ಷ ರೂ. ಆನ್‌ಲೈನ್ ಮೂಲಕ ವರ್ಗಾಯಿಸಿದರು.
ಆದರೆ ನಂತರ ಯಾವುದೇ ಲಾಭಾಂಶ ನೀಡದೇ, ವಿವಿಧ ಕಾರಣಗಳನ್ನು ಹೇಳಿ ಹಣ ವಾಪಸು ನೀಡದೇ ಮೋಸ ಮಾಡಿದ್ದಾರೆ. ತಾನು ಮೋಸಕ್ಕೊಳಗಾದುದನ್ನು ಗ್ರಹಿಸಿದ ದೂರುದಾರರು ತಕ್ಷಣವೇ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.