ಕೇಳಿರಯ್ಯ!

  • 06 Dec 2024 05:41:37 PM

ನೊಂದ ಮನಸಿಗೆ ಬೆಂದ ಮನುಜಗೆ 

ಹೆಚ್ಚು ತುಪ್ಪವ ಎರೆವರಯ್ಯ 

ಮುಂದೆ ನುಣ್ಣಗೆ ಚಂದ ಕಣ್ಣಿಗೆ 

ಹಿಂದೆ ಬಣ್ಣವೇ ಬೇರೆ ಅಯ್ಯ

 

ಎದುರು ಕದಿರದು ಒಡೆದ ಚಿಗುರು

 ಎಳೆಯ ಮುಗ್ಧತೆ ಇರುವುದಯ್ಯ

 ಅರಿವು ತಪ್ಪಲು ಮಾತ ನವಿರು 

ಮಳೆಯೆ ಇಲ್ಲದ ಹೊಳೆಯಂತಯ್ಯ

 

ಮುತ್ತು ಮುತ್ತಿನ ನುಡಿಗಳಾಡಿಯೇ 

ಮನದ ಇಂಗಿತ ಅರಿವರಯ್ಯ 

ಕತ್ತು ಒಮ್ಮೆಗೆ ಅತ್ತ ತಿರುಗುವ

 ಕ್ಷಣಕೆ ಮಸಿಯನು ಬಳಿವರಯ್ಯ

 

ಹತ್ತು ಹಲವು ಹುಸಿಯ ಭರವಸೆ 

ಒತ್ತಿ ಹೇಳುತ ಕೊಡುವರಯ್ಯ 

ತುತ್ತು ಮಾತಿಗೂ ಬೆಲೆಯೆ ಇಲ್ಲದೆ 

ಮತ್ತರಂತೆಯೇ ನಟಿಪರಯ್ಯ

 

ಯಾಕೆ ಈ ತರ ತಿಳಿವ ಕಾತರ

 ಕಿಚ್ಚು ತುಂಬಿದ ಲೋಕವಯ್ಯ 

ನೊಂದ ಮನಸಿಗೆ ಬೆಂದ ಮನುಜಗೆ 

ಹೆಚ್ಚು ತುಪ್ಪವ ಎರೆವರಯ್ಯ!!!

 

© ಪಲ್ಲವಿ ಪಿ ಕೆ _ ಮಂಜೇಶ್ವರ