ಸಂಜೆ ಐದರ ಸಮಯ.ಸುಂದರವಾದ ಯುವತಿಯೊಬ್ಬಳು,ತಾತನ ಜೊತೆ ಪಾರ್ಕ್ ಗೆ ವಾಕಿಂಗ್ ಗೆ ಬಂದಿದ್ದಳು.ತಾತನಿಗೆ ಸುಸ್ತಾಗಿದ್ದರಿಂದ ಅಲ್ಲಿ ಪಕ್ಕದಲ್ಲಿರುವ ಬೆಂಚಿನಲ್ಲಿ ತಾತನನ್ನು ಕೂರಿಸಿ, ಅವಳು ಅವರ ಸನಿಹದಲ್ಲಿ ಕುಳಿತಳು.
ಅವಳ ಕಣ್ಣುಗಳು ಯಾರನ್ನೋ ಅರಸುತ್ತಿದ್ದವು.
ಸ್ವಲ್ಪ ದೂರದಲ್ಲಿ ಮಕ್ಕಳು ಖುಷಿಯಿಂದ ಆಟವಾಡುತ್ತಿದ್ದರು.ಜೋರಾಗಿ ನಗುತ್ತಿದ್ದರು.ಆ ಧ್ವನಿಗೆ ಅವಳು ಅತ್ತ ನೋಡಿದಳು.
ಮಕ್ಕಳನ್ನು ನಗಿಸುತ್ತಿರುವ ಆ ವ್ಯಕ್ತಿಯನ್ನು ಕಂಡಾಗ, ಅವಳ ಮೊಗದಲ್ಲಿ ನಗುವರಳಿತು.
ತಾತ ಅವಳಲ್ಲಿ, *ಚಂದು ಪುಟ್ಟ!ನೀನು ಯಾವಾಗಲೂ ಬೆಳಗ್ಗೆ ಇಲ್ಲಿ ಜಾಗಿಂಗ್ ಗೆ ಬರ್ತೀಯ..ಹಾಗೆ ಸಂಜೆ ನನ್ನನ್ನು ವಾಕಿಂಗ್ ಗೆ ಕರ್ಕೊಂಡ್ ಬರ್ತೀಯ.ಅಷ್ಟು ಕೆಲಸಗಳ ಮಧ್ಯೆ ನೀನು ಸುಸ್ತಾಗಿರ್ತೀಯ. ಅದರ ನಡುವೆ ಈ ವಾಕಿಂಗ್ ಎಲ್ಲಾ ಬೇಕ?ಸ್ವಲ್ಪ ರೆಸ್ಟ್ ಮಾಡ್ಬಾರ್ದ ಪುಟ್ಟ* ಎಂದರು ಕಾಳಜಿಯಿಂದ.
ಆಗ ಅವಳು ನಗುತ್ತಾ,*ತಾತ ಇದರಿಂದ ನನಗೆ ಆಯಾಸ ಏನಿಲ್ಲ..ಅಷ್ಟೇ ಅಲ್ಲ. ತುಂಬಾ ಖುಷಿಯಾಗಿದ್ದೀನಿ ಕೂಡ.. ನೀವು ಚಿಂತೆ ಮಾಡಬೇಡಿ.* ಎಂದಳು.
ಹಾಗೆ ಸ್ವಲ್ಪ ಸಮಯದ ನಂತರ ಅವರು ತಮ್ಮ ಗೂಡನ್ನು ಸೇರಿದರು.
*ನಂದ ಗೋಕುಲ,* ಇದು ಮೈಸೂರಿನ ಪ್ರಸಿದ್ಧವಾದ *ಜಾನಕಿ ಕನ್ಸ್ಟ್ರಕ್ಷನ್* ರವರ ಮನೆ.
ಇದರ ಸ್ಥಾಪಕ ಜನಾರ್ಧನ್ ರಾವ್ ರವರು.ಅವರ ಧರ್ಮಪತ್ನಿ ಜಾನಕಿ. ಈ ದಂಪತಿಗಳ ಏಕೈಕ ಪುತ್ರ ಮೋಹನ್ ರಾವ್.ಇವರ ಪತ್ನಿ ನಿರ್ಮಲ ರಾವ್. ಇವರ ಏಕೈಕ ಪುತ್ರಿ ಆದ್ಯ ರಾವ್.
ಜಾನಕಿ ಯವರು ಮೋಹನ್ ರವರು
ಹುಟ್ಟಿದ ತಕ್ಷಣ, ಇಹಲೋಕವನ್ನು ತ್ಯಜಿಸಿದರು. ಜನಾರ್ಧನ್ ರವರು ಮಗನಿಗೆ ಉತ್ತಮ ವಿದ್ಯಾಭ್ಯಾಸದ ಜೊತೆಗೆ ಒಳ್ಳೆ ಸಂಸ್ಕಾರವನ್ನು ಹೇಳಿ ಕೊಟ್ಟಿದರು.
ನಿರ್ಮಲರವರೊಂದಿಗೆ ಮಗನ ಮದುವೆ ಮಾಡಿಸಿದರು. ನಿರ್ಮಲಾ ರವರು ಮನೆಗೆ ತಕ್ಕ ಸೊಸೆ.
ಶ್ರೀಮಂತರೆಂಬ ಅಹಂಕಾರ ಆ ಮನೆಯಲ್ಲಿ ಯಾರಿಗೂ ಇರಲಿಲ್ಲ.. ಮನೆ ಕೆಲಸದವರನ್ನು ಮನೆಯ ಸದಸ್ಯರಂತೆ ಕಾಣುತ್ತಿದ್ದರು..ಯಾರಾದರೂ ಸಹಾಯ ಕೇಳಿ ಬಂದರೆ, ಅವರನ್ನು ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ..ಇಂತಹ ಕುಟುಂಬದಲ್ಲಿ ಬೆಳೆದ ಆದ್ಯ ಸಹ ಉತ್ತಮ ಗುಣ ಹೊಂದಿದವಳಾಗಿದ್ದಳು. ಮನೆಯಲ್ಲಿ ಮಗು ತರ ಇರುವವಳು ಹೊರಗೆ ಗಂಭೀರವಾಗಿದ್ದಳು.
ಮನೆಗೆ ಬಂದ ಆದ್ಯ ಫ್ರೆಶ್ ಆಗಿ ಎಲ್ಲರೊಂದಿಗೆ ಡೈನಿಂಗ್ ಟೇಬಲ್ ಬಳಿ ಕೂತಳು.
*ಚಂದು ಪುಟ್ಟ ದಿನಾಲೂ ಆ ಪಾರ್ಕಿಂದ ಬಂದ ಮೇಲೆ ತುಂಬಾ ಖುಷಿಯಾಗಿರ್ತೀಯ.ಏನ್ ವಿಷಯ??*
(ಆದ್ಯ ನನ್ನು ಮನೆ ಯಲ್ಲಿ ಪ್ರೀತಿಯಿಂದ ಚಂದು ಎಂದು ಕರಿತ್ತಾರೆ) ಮೋಹನ್ ರವರು ಕೇಳಿದಾಗ,
*ಹಾಗೇನಿಲ್ಲ ಪಪ್ಪ..* ಎಂದಳು ಆದ್ಯ.
*ಏನೋ ಇದೆ.. ನಾನು ನಿನ್ನ ಗಮನಿಸಿಸ್ತಾ ಇದ್ದೀನಿ.* ನಿರ್ಮಲಾ ರವರು ಸಹ ಹೇಳಿದಾಗ, *ಪಾಪ ಮಗು.. ಹೋಗಲಿ ಬಿಡಮ್ಮ. ಇಬ್ಬರೂ ಏನು ಹೇಳಬೇಡಿ* ಮೊಮ್ಮಗಳ ಪರ ವಹಿಸಿ ನುಡಿದರು ಜನಾರ್ಧನ್ ರವರು.
*ನನಗೆ ಊಟ ಸಾಕು.ನಾನು ಮಲಗ್ತೀನಿ*
ಎಂದು ತನ್ನ ಕೋಣೆಗೆ ಬಂದವಳು, ಮಂಚದಲ್ಲಿ ಅಂಗಾತ ಮಲಗಿ, ಅವನ ಬಗ್ಗೆ ಯೋಚಿಸ ತೊಡಗಿದಳು.
೪ ವರ್ಷದ ಹಿಂದೆ...
ನಾನು ಇಂಜಿನಿಯರಿಂಗ್ ಫೈನಲ್ ಇಯರ್ ಓದುತ್ತಿದ್ದೆ... ಅದೊಂದು ಭಾನುವಾರ, ಆಶ್ರಮಕ್ಕೆ ಹೋಗ್ತ ಇರುವಾಗ ದಾರಿಯಲ್ಲಿ ಜನರು ಸೇರಿದ್ದರು.. ಏನಾಯ್ತು ಎಂದು ನೋಡುವಾಗ ಒಬ್ಬರು ಅಜ್ಜಿಗೆ ಆ್ಯಕ್ಸಿಡೆಂಟ್ ಆಗಿತ್ತು.. ಯಾರು ಅವರನ್ನು ಆಸ್ಪತ್ರೆಗೆ ಸೇರಿಸಲು ಮುಂದೆ ಬರ್ತಾ ಇರಲಿಲ್ಲ. ಅಲ್ಲಿದ್ದವರಿಗೆ ಮನಸ್ಸಲ್ಲಿ ಬೈದು, ನಾನು ಮುಂದೆ ಹೋಗುವಷ್ಟರಲ್ಲಿ ಒಬ್ಬರು ಅಜ್ಜಿಯನ್ನು ಎತ್ತಿಕೊಂಡು, ಆಟೋ ಹಿಡಿದು ಆಸ್ಪತ್ರೆಗೆ ಸೇರಿಸಿದರು. ಅವತ್ತು ನಾನು ಮೊದಲ ಸಲ ಅವರನ್ನು ನೋಡಿದ್ದು. ಅವರ ಆ ಗುಣ ಇಷ್ಟ ಆಯಿತು.
ಅದಾದ ಮೇಲೆ ಒಂದು ದಿನ ಸ್ಕೂಟಿ ಸರಿ ಇರಲಿಲ್ಲ ಎಂದು ಬಸ್ಸಲ್ಲಿ ಹೋದೆ.ಬಸ್ ನಲ್ಲಿ ಒಂದು ಮಗು ಅಳುತ್ತಿತ್ತು .ಮಗುವಿನ ತಾಯಿ ಎಷ್ಟು ಸಮಾದಾನ ಮಾಡಿದರೂ, ಮಗು ಅಳು ನಿಲ್ಲಿಸಲಿಲ್ಲ.ಆಗ ಅವರು ಬಂದು ಆ ಮಗುವನ್ನು ಎತ್ತಿಕೊಂಡರು.
ಅದೇನು ಮ್ಯಾಜಿಕ್ ಮಾಡಿದರೋ ಗೊತ್ತಿಲ್ಲ.
ಮಗು ಅಳು ನಿಲ್ಲಿಸಿತು. ಮಗುವಿನ ತಾಯಿ ಅವರಿಗೆ ಧನ್ಯವಾದಗಳು ಹೇಳಿದರು.
ಎರಡನೇ ಸಲ ಅವರಿಗೆ ನಾನು ಸೋತೆ.
ಅದಾದ ನಂತರ ಒಂದಲ್ಲ ಒಂದು ಸಂದರ್ಭದಲ್ಲಿ ಸಿಗುತ್ತಿದ್ದರು.ಅವರನ್ನು ನೋಡಿದ ಕ್ಷಣ ನನಗೆ ತಿಳಿಯದೆ, ಏನೋ ಒಂದು ಹೊಸ ಭಾವನೆ ನನ್ನಲ್ಲಿ..ಮೊದಲು ಕ್ರಶ್ ಅಂದುಕೊಂಡಿದ್ದೆ..ಆಮೇಲೆ ಗೊತ್ತಾಯಿತು
ನಾನು ಪ್ರೀತಿಯಲ್ಲಿ ಬಿದ್ದೆ ಅಂತ.
ಹೀಗೆ ದಿನಗಳು ಕಳೆದವು.... ಅವರಲ್ಲಿ ನನ್ನ ಪ್ರೀತಿ ಹೇಳಬೇಕು ಅಂದುಕೊಂಡೆ.ಒಂದು ದಿನ ನಾನು ಫ್ರೆಂಡ್ಸ್ ಜೊತೆ ಮಾಲ್ ಗೆ ಹೋದಾಗ ಅಲ್ಲಿ ಅವರನ್ನು ನೋಡಿದೆ.. ಅವರ ಜೊತೆ ಮಾತನಾಡಬೇಕು, ಪ್ರೀತಿ ವಿಷಯ ಹೇಳಬೇಕು ಅಂತ ಹೋದೆ.. ಅಷ್ಟರಲ್ಲಿ ಒಂದು ಹುಡುಗಿ ಬಂದು ಅವರನ್ನು ಪ್ರಪೊಸ್ ಮಾಡಿದಳು. ನನಗೆ ಹೃದಯದಲ್ಲಿ ಯಾರೊ ಬಂಡೆ ಕಲ್ಲು ಹಾಕಿದ ಹಾಗಾಯಿತು..ಏನೇ ಆಗಲಿ ಅವರು ಏನು ಹೇಳುತ್ತಾರೆ ಎಂದು ಕೇಳಬೇಕು ಎಂದು ಕಾದೆ..'ಇದು ಆಕರ್ಷಣೆ ಅಷ್ಟೇ..ಈಗ ಓದುವ ವಯಸ್ಸು.ಮೊದಲು ನಿನ್ನ ಗುರಿ ಸಾಧಿಸು.ಎಂದು ಆ ಹುಡುಗಿಗೆ ಬುದ್ಧಿ ಹೇಳಿದರು.
ನನಗೆ ಅದನ್ನು ಕೇಳಿ ತುಂಬಾ ಖುಷಿಯಾಯಿತು.. ನನಗೆ ಮೊದಲು ನನ್ನ ಗುರಿ ಸಾಧಿಸಬೇಕು.ಆಮೇಲೆ ಅವರ ಬಳಿ ಪ್ರೀತಿ ಹೇಳೋಣ ಎಂದು ನಿರ್ಧಾರ ಮಾಡಿದೆ.
ನಾನು ಇಂಜಿನಿಯರಿಂಗ್ ಪೂರ್ತಿಗೊಳಿಸಿದೆ
ಮುಂದೆ ಎಮ್ ಬಿ ಎ ಓದಲು ಲಂಡನ್ ಗೆ ಹೋದೆ. ಅವರ ನೆನಪು ನನ್ನನ್ನು ಕಾಡುತ್ತಲೆ ಇತ್ತು.. ಹೇಗೋ ಎರಡು ವರ್ಷಗಳ ನಂತರ ಓದು ಮುಗಿಸಿ ವಾಪಸ್ ಬಂದೆ..
ಆಗಲೇ ಒಂದು ವಿಷಯ ನೆನಪಾದದ್ದು
ನನ್ನ ಪ್ರೀತಿ ಗೆ ಮೂರು ವರ್ಷವಾದರೂ ಅವರ ಹೆಸರು,ಅವರ ಕೆಲಸ ಏನು ಗೊತ್ತಿಲ್ಲ ಎಂದು. ಬಹುಶಃ ಪ್ರೀತಿಸುವ ಹುಡುಗನ ಹೆಸರು ಗೊತ್ತಿಲ್ಲದ ಮೊದಲ ಹುಡುಗಿ ನಾನೇ ಅನಿಸುತ್ತದೆ.
ಪಪ್ಪ ಕೇಳಿದರು ,*ಮುಂದಿನ ಪ್ಲಾನ್ ಏನು?* ಎಂದು.
ಆಗ ನಾನು,'ನನ್ನ ಕನಸು ನನಗೆ ನನ್ನದೆ ಸ್ವಂತ ಬಿಸ್ನೆಸ್ ಮಾಡಬೇಕು. ನಾನು ಬ್ಯಾಂಕ್ ನಿಂದ ಲೋನ್ ತೆಗೆದು ಬಿಸ್ನೆಸ್ ಮಾಡ್ತೀನಿ'ಎಂದೆ.
ಪಪ್ಪ ಒಪ್ಪಿದರು.. ಹಾಗೆ ಬ್ಯಾಂಕ್ ಗೆ ಹೋಗಿ ಬರುವಾಗ ನನ್ನ ಗೆಳೆಯ ರಾಮ್ ಸಿಕ್ಕಿದ.. ಅವನ ಹತ್ತಿರ ಮಾತನಾಡುತ್ತಿರುವಾಗ, ನಮ್ಮವರು ಅಲ್ಲಿಂದ ಹೋದರು.
ನಾನು ಅವರನ್ನೇ ನೋಡುತ್ತಿದ್ದೆ. ರಾಮ್ ಅವರ ಹತ್ತಿರ ಹೋಗಿ ಮಾತನಾಡಿ ಬಂದ. ನಾನು ರಾಮ್ ಬಳಿ ಅವರ ಬಗ್ಗೆ ವಿಚಾರಿಸಿದೆ..ಆಗ ಗೊತ್ತಾಯಿತು ಅವರ ಹೆಸರು ಪ್ರಥಮ್ ಎಂದು ಅವರು ಜಿಂ ಕೋಚ್. ಮತ್ತವರು ಪ್ರತಿ ದಿನ ಬೆಳಿಗ್ಗೆ ಜಾಗಿಂಗ್ ಗೆ ಹೋಗುತ್ತಾರೆ ಎಂದು.
ಅವತ್ತಿನಿಂದ ನಾನು ಅದೇ ಸಮಯಕ್ಕೆ ಜಾಗಿಂಗ್ ಹೋಗಲು ಪ್ರಾರಂಭಿಸಿದೆ.
ಸಂಜೆ ಅವರು ಪಕ್ಕದ ಮನೆ ಮಕ್ಕಳ ಜೊತೆ ಪಾರ್ಕ್ ಗೆ ಬರುತ್ತಾರೆ.. ಅವರಿಗೆ ಮಕ್ಕಳೆಂದರೆ ಇಷ್ಟ.
ನನ್ನ ಕನಸು ಬಿಸ್ನೆಸ್ *A P group of company* ಶುರು ಮಾಡಿ ಒಂದು ವರ್ಷ ಆಯಿತು.
( A P - ಆದ್ಯ ಪ್ರಥಮ್). ಇನ್ನು ಅವರ ಬಳಿ ನನ್ನ ಪ್ರೀತಿ ವಿಷಯ ಹೇಳಿ ,ಅವರನ್ನು ಮದುವೆ ಆಗಿ ಕೊನೆ ಉಸಿರು ಇರುವವರೆಗೆ ತುಂಬಾ ಪ್ರೀತಿ ಮಾಡಬೇಕು.ನಾಳೆ ನೆ ಪ್ರೀತಿ ಬಗ್ಗೆ ಹೇಳಬೇಕು.
ಮರುದಿನ....
ಅದೇ ಪಾರ್ಕ್. ಪ್ರಥಮ್ ಬರುತ್ತಿದ್ದ..ಅವನ ಬಳಿ ಹೋಗಿ
*ನೋಡಿ ನನಗೆ ಸುತ್ತಿ ಬಳಸಿ ಮಾತಾಡೋಕೆ ಬರಲ್ಲ.. ನಾನು ನಾಲ್ಕು ವರ್ಷದಿಂದ ನಿಮ್ಮನ್ನು ಪ್ರೀತಿಸುತ್ತಿದ್ದೀನಿ..* ಎಂದು ಮೊದಲ ಭೇಟಿಯಿಂದ ಇಲ್ಲಿ ತನಕ ಇರುವ ಎಲ್ಲಾ ವಿಷಯಗಳನ್ನು ಹೇಳಿದಳು.. *ನೋಡಿ ನಾಳೆ ಸಂಜೆ ೫ ಗಂಟೆಗೆ ಆಶ್ರಮದ ಹತ್ತಿರ ಬನ್ನಿ.. ನಿಮ್ಮ ನಿರ್ಧಾರ ತಿಳಿಸಿ* ಎಂದು ಹೋದವಳು, ಪುನಃ ತಿರುಗಿ ಬಂದು ಐ *ಲವ್ ಯೂ* ಎಂದು ಕಣ್ಣು ಹೊಡೆದು ಹೋದಳು. ಅವನಿಗೆ ಅಚ್ಚರಿಯಾಗಿತ್ತು.
ಮನೆಗೆ ಬಂದವ ಯೋಚಿಸ ತೊಡಗಿದ...
ಆರು ತಿಂಗಳ ಹಿಂದೆ , ಆಶ್ರಮಕ್ಕೆ ಹೋಗುವಾಗ ಅಲ್ಲಿಂದ ಒಂದು ಹುಡುಗಿ ಹೋದಳು.. ಮುಖ ನೋಡಲಿಲ್ಲ.. ಮಕ್ಕಳು ತುಂಬಾ ಖುಷಿ ಆಗಿದ್ದರು.ಕಾರಣ ಅವಳು.. ಮಕ್ಕಳಿಗೆ ಬಟ್ಟೆ, ಪುಸ್ತಕ ಮತ್ತು ಅಗತ್ಯವಾದ ವಸ್ತುಗಳನ್ನು ಕೊಟ್ಟು ಹೋಗಿದ್ದಳು. ಈಗಿನ ಕಾಲದಲ್ಲಿ ಇಂತಹ ಹುಡುಗಿ ಇದ್ದಾಳ ?? ಆಶ್ಚರ್ಯವಾಯಿತು.. ಅವಳ ಮುಖ ನೋಡಲಿಲ್ಲ ಎಂದು ಬೇಸರ ವಾಯಿತು.. ಅಲ್ಲಿ ಸೀತಮ್ಮನಲ್ಲಿ ಹೇಳಿದೆ ಇನ್ನು ಆ ಹುಡುಗಿ ಬಂದರೆ ತಿಳಿಸಿ ಎಂದು. ದಿನೇ ದಿನೇ ಅವಳನ್ನು ನೋಡುವ ಹಂಬಲ ಜಾಸ್ತಿಯಾಯಿತು.. ಕೊನೆಗೆ ಅವಳ ಮೇಲೆ ಪ್ರೀತಿಯಾಯಿತು. ಪಾರ್ಕ್ನಲ್ಲಿ ದಿನಾ ಒಂದು ಹುಡುಗಿ ಸಿಗುತ್ತಿದ್ದಳು.. ಆಮೇಲೆ ಗೊತ್ತಾಯಿತು ಅವತ್ತು ಆಶ್ರಮದಲ್ಲಿ ನೋಡಿ ಪ್ರೀತಿ ಮಾಡಿದ್ದು ಅವಳನ್ನೇ ಎಂದು. ಆದರೆ ಅವಳು ಶ್ರೀಮಂತ ಮನೆತನದ ಹುಡುಗಿ.. ನಾನು ಮಧ್ಯಮ ವರ್ಗದ ಹುಡುಗ ಮತ್ತು ಅನಾಥ. ನನ್ನನ್ನು ಮದುವೆ ಆದರೆ, ಅವಳು ಖುಷಿಯಾಗಿರಲು ಸಾಧ್ಯವಿಲ್ಲ. ಆದರೆ ನನ್ನ ಜೀವನದಲ್ಲಿ ಇನ್ನೊಂದು ಹುಡುಗಿಗೆ ಸ್ಥಾನವಿಲ್ಲ.. ಅವಳ ಫೋಟೋ ತೆಗೆದು ಅವಳ ನೆನಪಲ್ಲಿ ಬಾಳಬೇಕು ಅಂದುಕೊಂಡಿದ್ದೆ.. ಆದರೆ ಇವತ್ತು ನನ್ನ ಹುಡುಗಿ ನನಗೆ ಪ್ರಪೊಸ್ ಮಾಡಿದಳು.. ನಾನು ಅವಳ ನಾಲ್ಕು ವರ್ಷದ ಪ್ರೀತಿ.. ನಂಬುವುದಕ್ಕೆ ಆಗಲಿಲ್ಲ.. ಬೇಸರ ಹಾಗೂ ಸಂತೋಷ ಒಟ್ಟಿಗೆ ಆಯಿತು..
ಆದರೆ ಅವಳು ನನಿಂದ ಕಷ್ಟ ಪಡೋದು ಬೇಡ. ನಾಳೆ ಹೋಗಿ ನನಗೆ ನೀನು ಇಷ್ಟ ಇಲ್ಲ ಹೇಳ್ಬೇಕು..
ಮರುದಿನ ಬೆಳಗ್ಗೆ...
ಅವಳನ್ನು ನೋಡಲು ಹೋಗುವಾಗ ದಾರಿಯಲ್ಲಿ ಅವಳ ಕಾರು ನಿಂತಿರುವುದನ್ನು ಕಂಡ ಅವಳನ್ನು ಹುಡುಕಿದ.. ಅವಳು ಬರುವಾಗ ಒಂದು ಮಗು ರಸ್ತೆಯ ಮಧ್ಯದಲ್ಲಿ ಇತ್ತು.. ವಾಹನಗಳು ಬರುತ್ತ ಇತ್ತು.. ಅವಳು ಓಡಿ ಹೋಗಿ ಆ ಮಗುವನ್ನು ಎತ್ತಿದಳು.. ಅವಳನ್ನು ಕಂಡಾಗ ಅವನಿಗೆ ಸಮಾಧಾನವಾಯಿತು.. ಆದರೆ ಅಷ್ಟರಲ್ಲಿ ಒಂದು ಅನಾಹುತ ನಡೆದು ಹೋಯಿತು.. ಅವಳು ಮಗುವನ್ನು ಕಾಪಾಡಿ ಹಿಂದೆ ಬರುವಾಗ ವಿರೋಧ ದಿಶೆಯಲ್ಲಿ ಬಂದ ಲಾರಿ ಅವಳಿಗೆ ಢಿಕ್ಕಿ ಹೊಡೆದು ಹೋಯಿತು.. ಮಗುವನ್ನು ತಳ್ಳಿದರಿಂದ ಅದು ಅಪಾಯದಿಂದ ಪಾರಾಗಿತ್ತು.
ಪ್ರಥಮ್ ಓಡಿ ಬಂದು ಅವಳನ್ನು ತನ್ನ ಮಡಿಲಲ್ಲಿ ಮಲಗಿಸಿದ..
*ನೋಡು ನಿನಗೇನೂ ಆಗಲ್ಲ. ನಾವು ಆಸ್ಪತ್ರೆಗೆ ಹೋಗೋಣ* ಎಂದಾಗ, *ನಾನು ಬದುಕುವುದಿಲ್ಲ.. ಹೋಗೋ ಮುಂಚೆ ಒಂದೇ ಒಂದು ಸಲ ಪ್ರೀತಿಸ್ತೀನಿ ಅಂತ ಹೇಳ್ತೀರ*?ಎಂದು ಕಷ್ಟ ಪಟ್ಟು ನುಡಿದಳು ಆದ್ಯ. ಆದರೆ,ಅವನು ಹೇಳುವ ಮೊದಲೇ ಅವಳ ಪ್ರಾಣಪಕ್ಷಿ ಹಾರಿ ಹೋಗಿತ್ತು... ಕೊನೆ ಘಳಿಗೆಯಲ್ಲೂ ಅವಳ ಮುಖದಲ್ಲಿ ನಗುವಿತ್ತು.. ಇನಿಯನ ಮಡಿಲಲ್ಲಿ ಪ್ರಾಣ ಬಿಟ್ಟ ತೃಪ್ತಿ ಇತ್ತು..
ಅವನು... *ನೋ* ಎಂದು ಕಿರುಚಿದ.
__________________________________________
೨ ವರ್ಷಗಳ ನಂತರ
ಪ್ರಥಮ್ ಆದ್ಯಳ ಫೋಟೋ ಮುಂದೆ ನಿಂತು ಹಳೆಯ ನೆನಪಿಗೆ ಜಾರಿದ್ದ.ಅವನನ್ನು *ಅಪ್ಪ* ಅನ್ನುವ ಧ್ವನಿ ಎಚ್ಚರಿಸಿತು.
*ಅಮ್ಮು* ಎಂದು ಕರೆದಾಗ ೪ ವರ್ಷದ ಅದಿತಿ ಓಡಿ ಬಂದು ಅವನ ತೋಳು ಸೇರಿದಳು... *ಅಪ್ಪ..ಯಾಕೆ ಅಳ್ತಾ ಇದ್ಯಾ? ಅಮ್ಮನ ನೆನಪಾಯಿತ?* ಮುದ್ದಾಗಿ ಕೇಳಿದಳು.
ಅವನು ಅವಳ ನೆತ್ತಿಗೆ ಹೂ ಮುತ್ತನ್ನಿಟ್ಟು,*ನಿಮ್ಮಮ್ಮನ್ನ ಮರೆತರೆ ತಾನೆ ನೆನಪು ಮಾಡೋದು.. ಅವಳು ಯಾವಾಗಲೂ ಇಲ್ಲಿರ್ತಾಳೆ* ಎಂದು ತನ್ನ ಎದೆ ಮೇಲೆ ಕೈ ಇಟ್ಟು ನುಡಿದ.ಅದಿತಿ ಅವನನ್ನು ಗಟ್ಟಿಯಾಗಿ ತಬ್ಬಿಕೊಂಡು ಕೆನ್ನೆಗೆ ಮುತ್ತು ಕೊಟ್ಟಳು.
*ತಾತ ಕರಿತ್ತಿದ್ದಾರೆ... ಬೇಗ ಬಾ.*
*ನೀ ಹೋಗಿರು ಚಿನ್ನ.... ಅಪ್ಪ ಈಗ ಬಂದೆ.*
ಅದಿತಿ ಸರಿ ಎಂದು ತಲೆಯಾಡಿಸಿ ಅಲ್ಲಿಂದ ಹೋದಳು.
ಪ್ರಥಮ್ ,ಆದ್ಯಳ ಫೋಟೋ ನೋಡಿ, ನೋಡಿದ್ಯ ಮುದ್ದು.. ನಮ್ಮ ಮಗಳು ಎಷ್ಟು ಮುದ್ದಾಗಿದ್ದಾಳೆ.. ಅವತ್ತು ನೀನು ನಮ್ಮನ್ನು ಬಿಟ್ಟು ಹೋದ ಮೇಲೆ... ನಿನ್ನ ಪ್ರಾಣ ಬಿಟ್ಟು ನೀ ಉಳಿಸಿದ ಮಗು ಬಗ್ಗೆ ತಿಳಿಯಲು ಫ್ರೆಂಡ್ ಗೆ ಹೇಳಿದೆ.
ಅವನ ಪ್ರಕಾರ ಈ ಮಗು ಮಂಗಳೂರಲ್ಲಿ ಹುಟ್ಟಿದ್ದು.. ತಂದೆ ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು.. ತಾಯಿ ಗೃಹಿಣಿ.. ಅವರದು ಲವ್ ಮ್ಯಾರೇಜ್.. ಆದುದರಿಂದ ಸಂಬಂಧಿಕರು ಯಾರು ಇರಲಿಲ್ಲ.. ಒಂದು ದಿನ ಅವರು ಕಾರಿನಲ್ಲಿ ಕೊಲ್ಲೂರು ದೇವಸ್ಥಾನಕ್ಕೆ ಹೊರಟಿದ್ದರು.. ಆಗ ಆದ ಆ್ಯಕ್ಸಿಡೆಂಟ್ ನಲ್ಲಿ ಪ್ರಾಣ ಕಳೆದುಕೊಂಡರು.
ಮಗುವನ್ನು ಒಬ್ಬ ಮಹಿಳೆ ಎತ್ತಿಕೊಂಡು ಹೋದಳು.ಆದರೆ ಅವಳು ಮಕ್ಕಳ ಕಳ್ಳಿ.. ಮಗುವನ್ನು ಇಲ್ಲಿಗೆ ಕರೆದುಕೊಂಡು ಬಂದಳು..ಅವತ್ತು ಮಗುವನ್ನು ಕೆಳಗಿಳಿಸಿ ಟೀ ಕುಡಿಯುತ್ತಿರುವಾಗ ಮಗು ಮೆಲ್ಲಗೆ ನಡೆದು ರಸ್ತೆ ತಲುಪಿತು.. ಆಮೇಲೆ ಮಗುವನ್ನು ನೀನು ಕಾಪಾಡಿದೆ..
ನೀನು ಹೋದ ಮೇಲೆ ಅವಳು ನನ್ನ ಜವಾಬ್ದಾರಿ. ನಿಮ್ಮ ಮನೆಯಲ್ಲಿ ವಿಷಯ ತಿಳಿಸಿದೆ.. ಅವರು ಒಪ್ಪಿದರು.. ನಾನು ಮಗುನ ದತ್ತು ತೆಗೆದುಕೊಂಡು ಅವಳಿಗೆ ತಂದೆಯಾದೆ.. ಅವಳು ಅಮ್ಮನನ್ನು ಕೇಳಿದಾಗ ನಿನ್ನ ಫೋಟೋ ತೋರಿಸಿದೆ.. ಮಾವ ನನ್ನನ್ನು ಅಳಿಯನಾಗಿ ಸ್ವೀಕರಿಸಿದರು.. ನಿನ್ನ ಕನಸು A P group of company ಜವಾಬ್ದಾರಿ ನನಗೆ ಕೊಟ್ಟರು....
ನಾನು ಅಮ್ಮುಗೆ ಅಪ್ಪನಾಗಿ... ನಿಮ್ಮ ಅಲ್ಲ ನಮ್ಮ ಮನೆ ಮಗನಾಗಿ.. ನಿನ್ನ ನೆನಪಲ್ಲಿ ಕೊನೆ ತನಕ ಬಾಳುವೆ.. ಈ ಜನ್ಮದಲ್ಲಿ ನೀನು ನನ್ನ ಬಿಟ್ಟು ಹೋದೆ... ಕೊನೆಗೂ ನನ್ನ ಪ್ರೀತಿ ನಿನಗೆ ಹೇಳಲಾಗಲಿಲ್ಲ.. ಮುಂದಿನ ಎಲ್ಲಾ ಜನ್ಮಗಳಲ್ಲೂ ನೀನು ನನ್ನ ಜೊತೆ ಇರಬೇಕು... ಇರುವೆಯಲ್ಲಾ?ಹೇಳು ಮುಂದಿನ ಜನ್ಮದಲ್ಲಾದರೂ, ನನಗಾಗಿ ಬರುವೆಯಾ?
ಮುಕ್ತಾಯ
( ನಾವು ತುಂಬಾ ಪ್ರೀತಿಸಿದವರು ನಮ್ಮನ್ನು ಬಿಟ್ಟು ಹೋದರೆ, ನಾವು ಹೋಗಬೇಕೆಂದಿಲ್ಲ... ಸಾವು ದೇಹಕ್ಕೆ... ಪ್ರೀತಿಗೆ ಸಾವಿಲ್ಲ... ಅವರು ಪ್ರತಿ ಕ್ಷಣ ನಮ್ಮೊಂದಿಗೆ ಇರುತ್ತಾರೆ.. ಹೃದಯದಲ್ಲಿ.. ಸಾವಿಲ್ಲದ ನೆನಪಾಗಿ)
ವಂದನ ಗಿರೀಶ್ _ ಮಂಗಳೂರು