ಅವನ ಪರಿಚಯವಾದ ಆ ದಿನ!

  • 12 Dec 2024 05:13:40 PM

ಹಾಯ್.... ಎಲ್ಲರಿಗೂ ನಮಸ್ಕಾರ.... ನನ್ನ ಹೆಸರು ಲಕ್ಷ್ಯ... ಎಲ್ಲರ ಪ್ರೀತಿಯ... ಬೇಡ ಬಿಡಿ.... ಅಪ್ಪ ಅಮ್ಮ ನ ಪ್ರೀತಿಯ ಲಚ್ಚು.... ಅವರ ಮುದ್ದಿನ ಮಗಳು.... 

 

ನನ್ನ ಅಪ್ಪ ಮಾಧವ.... ಬೆಂಗಳೂರಿನ ಫೇಮಸ್ ಲಾಯರ್.... ಅಮ್ಮ ರಾಧ  ಲೆಕ್ಚರರ್.. ಇಬ್ಬರ ಪ್ರೀತಿಗೆ ಏಕೈಕ ಅಧಿಕಾರಿ ನಾನು... ನಾನು... ಅಪ್ಪ... ಅಮ್ಮ... ಇದಿಷ್ಟೇ ನನ್ನ ಪುಟ್ಟ ಪ್ರಪಂಚ... 

 

ಅಯ್ಯೋ ಟೈಮ್ ಆಯ್ತು.... ಕಾಲೇಜಿಗೆ ಹೋಗಬೇಕು.... ಬಾಕಿ ಕಥೆ ಕಾಲೇಜಿಗೆ ತಲುಪಿದ ಮೇಲೆ ಹೇಳ್ತೀನಿ ಆಯ್ತಾ... 

 

ಅಬ್ಬಾ.... ಅಂತೂ ಆ ರಶ್ ಬಸ್ ಹತ್ತಿ, ಕಷ್ಟ ಪಟ್ಟು ಉಸಿರಾಡಿ ಇಲ್ಲಿ ವರೆಗೂ ತಲುಪಿದೆ ನೋಡಿ.... ಯಾಕೆ ಬಸ್ ನಲ್ಲಿ ಬರ್ತಿದ್ದಾಳೆ ಅಂತ ಯೋಚನೆ ಮಾಡ್ತಿದ್ದೀರಾ??? ನಂಗೆ ಎಲ್ಲರ ತರ ಬಸ್ ನಲ್ಲಿ ಹೋಗೋದು ಇಷ್ಟ... 

 

ಮ್.... ಸರ್ ಸರಿ... ಬೈಕೋಬೇಡಿ. ಈವಾಗ ನನ್ನ ಕಥೆ ಹೇಳ್ತೀನಿ... ಇದು ಶ್ರೀದೇವಿ ಕಾಲೇಜ್. ನಾನು ಇಲ್ಲಿ ಅಂತಿಮ ವರ್ಷದ ಪದವಿ (ವಾಣಿಜ್ಯ) ವಿದ್ಯಾರ್ಥಿನಿ. 

 

ನನಗೆ ಮಾತಾಡೋದು ಅಂದರೆ ತುಂಬಾ ಇಷ್ಟ.... ಎಲ್ಲರೂ ನನ್ನ ಫ್ರೆಂಡ್ಸ್... ಆದರೆ ಏನು ಗೊತ್ತಾ... 

 

*ಹೇ ಲಕ್ಷ್ಯ..... ನನ್ನ ಸಿ ಎ (ಕಂಪ್ಯೂಟರ್ ಅಪ್ಲಿಕೇಶನ್)  ರೆಕಾರ್ಡ್ ಬರೆದು ಆಯ್ತಾ*

 

ಹುಂ... ಸ್ನೇಹ ತಗೋ.... 

 

*ನಂಗೊತ್ತು ಕಣೇ... ನೀನು ಬರೆದು ತರ್ತೀಯಾ... ಅದಕ್ಕೆ ನೀನಂದ್ರೆ ನಂಗಿಷ್ಟ. ನೀನು ನನ್ನ ಬೆಸ್ಟ್ ಫ್ರೆಂಡ್....*

 

*ಹೇ ಸ್ನೇಹ.... ಅವಳತ್ರ ಏನೇ ಮಾತು.... ಬೇಗ ಬಾರೆ....*

 

*ಹುಂ ಬಂದೇ ಇಶಾ...*

 

 

ನೋಡಿದ್ರಲ್ವಾ..... ಇದೇ ನನ್ನ ಸಮಸ್ಯೆ.... ಎಲ್ಲರ ಜೊತೆ ಪ್ರೀತಿಯಿಂದ ಮಾತಾಡ್ತೀನಿ... ನಂಗೆ ಎಲ್ಲರೂ ಫ್ರೆಂಡ್ಸ್.... ಆದರೆ ಬೆಸ್ಟಿ ಅಂತ ಯಾರು ಇಲ್ಲ.... ಸ್ನೇಹ ಬರೀ ಬಾಯಿ ಮಾತಿಗೆ ಬೆಸ್ಟಿ ಅಂತ ಹೇಳ್ತಾಳೆ.... ಆದರೆ ಇಶಾ ಬಂದು ಕರೆದ ಕೂಡಲೇ ನನ್ನ ಇಗ್ನೋರ್ ಮಾಡಿ ಹೋದಳು.... ಹೀಗೆ ಎಲ್ಲರೂ ಏನೋ ಒಂದು ಸಹಾಯ ಅಂತ ಬಂದಾಗ ನನ್ನ ಜೊತೆ ಮಾತಾಡ್ತಾರೆ... ಇಲ್ಲದೆ ಇದ್ರೆ ಯಾರಿಗೂ ನಾನು ಬೇಡ.... 

 

ಮೊದಲೆಲ್ಲಾ ತುಂಬಾ ಬೇಸರವಾಗೋದು... ಆದರೆ ಈವಾಗ ಅಭ್ಯಾಸ ಆಗ್ ಹೋಯ್ತು... ನಂಗೆ ನಗೋದು ಅಂದರೆ ಎಲ್ಲರನ್ನೂ ನಗಿಸೋದು  ಅಂದರೆ ತುಂಬಾ ಇಷ್ಟ.... ಎಲ್ಲರೂ ನನ್ನ ಮುಂದೆ ನಗು ಚೆನ್ನಾಗಿದೆ ಅಂತ ಹೇಳಿ ಹಿಂದೆ ನನ್ನ ಹುಚ್ಚಿ ಅನ್ನೋರು.... ಅವತ್ತಿಂದ ನಗೋದನ್ನೇ ಬಿಟ್ಟೆ. 

 

ಹೀಗೆ ತುಂಬಾ ದಿನಗಳು ಕಳೆದವು... ಅವತ್ತು ನಮಗೆ ಸಿ ಎ  ಲ್ಯಾಬ್ ಟೆಸ್ಟ್ ಇತ್ತು. ಯಾವುದೋ ಹೊಸ ಲೆಕ್ಚರರ್ ಬಂದಿದ್ರು.... ನನ್ನ ಹತ್ರ ವೈವಾ ೨ ಪ್ರಶ್ನೆ ಕೇಳಿದ್ರು.... ನಾನು ಸರಿಯಾದ ಉತ್ತರ ನೀಡಿದೆ. ಗುಡ್ ಅಂದ್ರು... ನಾನು ನಗು ಬೀರಿದೆ... ಮೆಲ್ಲ ಕಿವಿ ಹತ್ತಿರ ಬಂದು ನೈಸ್ ಸ್ಮೈಲ್ ಅಂದ್ರು.... 

 

 

ನನಗೆ ಅವರು ಹೇಳಿದಕ್ಕೆ  ಖುಷಿ ಪಡಬೇಕೋ,ಅಥವಾ ಹಿಂದಿನ ಘಟನೆಗಳನ್ನು ನೆನೆಸಿ ಅಳಬೇಕೋ ತಿಳಿಯಲಿಲ್ಲ... 

 

ಹೇಗೋ ಬಿ. ಕಾಂ ಕಂಪ್ಲೀಟ್ ಮಾಡಿದೆ.... ಒಳ್ಳೆ ಮಾರ್ಕ್ಸ್ ತಗೊಂಡಿದ್ದೇ... ಅಪ್ಪ ಅಮ್ಮ ತುಂಬಾ ಖುಷಿ ಪಟ್ಟರು... ನನಗೆ ಸ್ವಲ್ಪ ದಿನ ರಾಮಪುರದಲ್ಲಿರೋ ಅಜ್ಜಿ ಮನೆಯಲ್ಲಿ ಇರೋಕೆ ಅನುಮತಿ ಕೊಟ್ಟರು.... ನಾನು ಖುಷಿಯಲ್ಲಿ ಎರಡು ಸ್ಟೆಪ್ ಹಾಕಿ.... ರಾಮಪುರದ ಬಸ್ ಹಿಡಿದೆ.

 

ಅಜ್ಜಿ ಲಕ್ಷ್ಮಿ ಅಂತ.... ಮನೆಯಲ್ಲಿ ಅಜ್ಜಿ ಒಬ್ಬರೇ ಇರೋದು.... ನಾನು ಬಂದಿದ್ದು ಅಜ್ಜಿಗೆ ತುಂಬಾ ಖುಷಿ ಆಯ್ತು... ಅಜ್ಜಿ ಜೊತೆ ಕೆಲವು ದಿನ ಸಂತೋಷದಿಂದ ಕಾಲ ಕಳೆದೆ.... 

ಅದೊಂದು ದಿನ ಬೆಟ್ಟಕ್ಕೆ ಹೋಗಬೇಕು ಅಂತ ತುಂಬಾ ಆಸೆ ಆಗ್ತಿತ್ತು.... ಅಜ್ಜಿಗೆ ನನ್ನ ಜೊತೆ ಬರೋಕೆ ಆಗಿಲ್ಲ... ಹೇಗೋ ಒಬ್ಬಳೇ ಬೆಟ್ಟ ಏರಿದೆ. ಅಲ್ಲಿ ನನಗೆ ಏನೋ ತುಂಬಾ ಖುಷಿ... ಆಮೇಲೆ ನನಗೆ ತುಂಬಾ ಬೇಕಾದವರು ಅಲ್ಲೇ ಎಲ್ಲೋ ಇದ್ದಾರೆ ಎಂದು ಬಲವಾಗಿ ಅನಿಸುತ್ತಿತ್ತು... 

ಯಾರೋ ಬಂದು  ನನ್ನ ಕಣ್ಣು ಮುಚ್ಚಿದರು.... ಆದರೆ ಅಲ್ಲಿ ನನಗೆ ಫ್ರೆಂಡ್ಸ್ ಅಂತ ಯಾರು ಇಲ್ಲ... ಇದ್ಯಾರಪ್ಪ ಅಂತ ಅನ್ಕೊಂಡು ಕೈ ತೆಗಿರಿ  ಅಂದೆ. ತಿರುಗಿ ನೋಡಿದಾಗ ಯಾರು ಇರಲಿಲ್ಲ.... ಆಮೇಲೆ ನೋಡಿದರೆ ನನ್ನ ಮುಂದೆ ಬಂದು ನಿಂತಿದ್ದರು... 

ಯಾರು ಅಂತ ಗೊತ್ತಾಯ್ತ...??? ಅದೇ ಅವತ್ತು ವೈವಾ ಇತ್ತಲ್ವಾ.... ಆವಾಗ ನೈಸ್ ಸ್ಮೈಲ್ ಅಂತ ಹೇಳಿದ ಲೆಕ್ಚರರ್... ನಾನು ಮಾತು ಮರೆತಂತೆ ನಿಂತು ಬಿಟ್ಟೆ. 

 

ಹಲೋ ಯಾಕೆ ಸೈಲೆಂಟ್ ಆದೆ..... ನೋಡು  ನನಗೆ ಕವಿ ತರ ಹೇಳೋಕೆ ಬರಲ್ಲ... ಡೈರೆಕ್ಟ್ ಆಗಿ ವಿಷಯ ಹೇಳ್ತೀನಿ... ನೀನು ತುಂಬಾ ತರ್ಲೆ, ತುಂಬಾ ಮಾತಾಡ್ತೀಯ, ತುಂಬಾ ನಗ್ತೀಯಾ, ನಗಿಸ್ತೀಯಾ, ಆಮೇಲೆ ಪುಟ್ಟ ಮಗು ತರ ಛೇಷ್ಟೆ ಮಾಡ್ತೀಯಾ... ನಿನ್ನ ಈ ಎಲ್ಲಾ ಗುಣಗಳು ನಂಗೆ ತುಂಬಾ ಇಷ್ಟ... ಯಾವಾಗ ಹೇಗೆ ಅಂತ ಗೊತ್ತಿಲ್ಲ... ನಿನ್ನ ಮೇಲೆ ಪ್ರೀತಿ ಆಗಿ ಹೋಯ್ತು.... ಅದರಲ್ಲಿ ಆ ನಿನ್ನ ನಗು ನಂಗೆ ತುಂಬಾ ತುಂಬಾ ಇಷ್ಟ... ಐ ಲವ್ ಯೂ... ವಿಲ್ ಯೂ ಮ್ಯಾರಿ  ಮೀ.... 

 

ಇದು ಕನಸಾ?? ನನ್ನ ಭ್ರಮೇ  ನಾ?? 

ಮೊದಲು ಅನಿಸೋದು  ನನ್ನ ಮದುವೆ ಆಗೋರು ನಾನು ಹೇಗಿದ್ದೀನೋ  ಹಾಗೆ ನನ್ನ ಸ್ವೀಕರಿಸಬೇಕು.... ಯಾರಿಗೋಸ್ಕರನೂ ನಾನು ಬದಲಾಗಬಾರದು  ಅಂತ... ಆದರೆ ಈವಾಗ ನೋಡಿದರೆ... ನನ್ನ ನಾನು ಹೇಗಿದ್ದೀನೋ ಹಾಗೆ ಇಷ್ಟ ಪಡುವವರು ಸಿಕ್ಕಿದರು.... 

 

ನನ್ನ ಉತ್ತರ..... *ಸರ್ ನನ್ನ ಮದುವೆ ನನ್ನ ಅಪ್ಪ ಅಮ್ಮ ಇಷ್ಟ ಪಡುವ ಹುಡುಗನ ಜೊತೆಗೆ ನಡೆಯೋದು ಕ್ಷಮಿಸಿ...*

 

೨ ವರ್ಷಗಳ ನಂತರ.... 

 

ಎಫ್ ಎಮ್ ಸ್ಟೇಷನ್ ನಲ್ಲಿ

 

ಹಾಯ್ ಹಲೋ ನಮಸ್ಕಾರ ಗೆಳೆಯರೇ, ನಾನು ನಿಮ್ಮ ಲಚ್ಚು... ಎಲ್ಲರಿಗೂ ಕಾಫಿ ವಿತ್ ಲಚ್ಚು.. ಕಾರ್ಯಕ್ರಮಕ್ಕೆ ಸ್ವಾಗತ ಸುಸ್ವಾಗತ..... ಇವತ್ತಿನ ನಮ್ಮ ಟಾಪಿಕ್ ಏನಪ್ಪಾ ಅಂದರೆ, ನೀವು ನಿಮ್ಮ ಜೀವನದಲ್ಲಿ ತುಂಬಾ ಖುಷಿ ಪಟ್ಟ ಆ ಕ್ಷಣ ಯಾವುದು??? 

 

ನಮ್ಮ ಮೊದಲನೇ ಕರೆ ಯಾರು ಅಂತ ನೋಡೋಣ 

 

*ಹಲೋ... ನಿಮ್ಮ ಹೆಸರು*

 

*ಹಲೋ ಲಚ್ಚು... ನನ್ನ ಹೆಸರು ಕಾವ್ಯ ಅಂತ... ನಾನು ಹೌಸ್ ವೈಫ್... ನಿಮ್ಮ ಕಾರ್ಯಕ್ರಮ ನನಗೆ ತುಂಬಾ ಇಷ್ಟ... ಮಿಸ್ ಮಾಡದೇ ಕೇಳ್ತಾ ಇರ್ತೀನಿ...*

 

*ಥಾಂಕ್ಸ್ ಕಾವ್ಯ ಅವರೇ. ಇವತ್ತಿನ ಟಾಪಿಕ್ ಗೊತ್ತಲ್ವ...??*

 

*ಹುಂ ಗೊತ್ತು.... ನಾನು ನನ್ನ ಜೀವನದಲ್ಲಿ ತುಂಬಾ ಖುಷಿ ಪಟ್ಟ ದಿನ ಅಂದರೆ ನನ್ನ ಪುಟ್ಟ ಕಂದಮ್ಮ ಈ ಭೂಮಿಗೆ ಬಂದ ದಿನ...*

 

*ವಾವ್... ವೆರಿ ನೈಸ್.... ಹೀಗೆ ಕರೆ ಮಾಡ್ತಾ ಇರಿ. ಕಾರ್ಯಕ್ರಮವನ್ನು ಕೇಳ್ತಾ ಇರಿ.. ಬಾಯ್....*

 

(ಹೀಗೆ ಐದಾರು ಕರೆಗಳ ನಂತರ, ) 

 

*ಹಲೋ... ನಿಮ್ಮ ಹೆಸರು?*

 

*ನನ್ನ ಹೆಸರು ಹೇಳಲ್ಲ ಮೇಡಮ್... ಆದರೆ ನನ್ನದೊಂದು ರಿಕ್ವೆಸ್ಟ್ ಇದೆ.... ಇವತ್ತಿನ ಟಾಪಿಕ್ ನಿಮ್ಮ ಆನ್ಸರ್ ಏನು ಅಂತ ಹೇಳಬೇಕು*

 

*ಹ್ಮ್... ಯಾವಾಗಲೂ ನಾನು ಪ್ರಶ್ನೆ ಕೇಳ್ತೀನಿ.. ನೀವು ಉತ್ತರ ಹೇಳ್ತೀರಾ.... ಇವತ್ತು ನಾನೇ ಉತ್ತರ ಹೇಳ್ಬೇಕಾ??*

 

*ಹೌದು ಹೇಳಿ*

 

*ಮ್..... ಹೇಳ್ತೀನಿ ಕೇಳಿ.... " ಅವನ ಪರಿಚಯವಾದ ಆ ದಿನ*

 

*ಮೇಡಮ್ ಈ ಅವನು ಅಂದರೆ ಯಾರು???* 

 

*ಹಲೋ... ಅಯ್ಯೋ ಲೈನ್ ಕಟ್ ಆಯ್ತು... ಓಕೆ ಸ್ನೇಹಿತರೇ ಇವತ್ತಿನ ಕಾರ್ಯಕ್ರಮ ಮುಕ್ತಾಯ ಗೊಳಿಸುವ ಸಮಯ ಬಂದಿದೆ.... ಮುಂದೆ ನಮ್ಮ ನಿಮ್ಮ ಭೇಟಿ.. ನಾಳೆ... ಎಲ್ಲರೂ ಖುಷಿಯಾಗಿ, ನಗ್ ನಗ್ತಾ ಇರಿ... ದಿಸ್ ಇಸ್ ಲಚ್ಚು ಸೈನಿಂಗ್  ಆಫ್*

 

ಮ್... ಏನಪ್ಪಾ ಇವಳು ಎಫ್ ಎಮ್ ಸ್ಟೇಷನ್ ನಲ್ಲಿ ಅಂತ ಯೋಚನೆ ಮಾಡ್ತಿದ್ದೀರಾ?? ಮ್... ಹೇಳ್ತೀನಿ ಕೇಳಿ... ಒಂದು ಪುಟ್ಟ ಫ್ಲಾಶ್ ಬ್ಯಾಕ್.... 

 

ಅವತ್ತು ಅವರು ಪ್ರಪೋಸ್ ಮಾಡಿದ ದಿನ... ನನ್ನ ಉತ್ತರ ಹೇಳಿ ನಾನು ಬೆಂಗಳೂರಿಗೆ ಹೋಗ್ ಬಿಟ್ಟೆ. 

ಮರುದಿನ ಅವರು ತಂದೆ ತಾಯಿ ಜೊತೆ ನಮ್ಮ ಮನೆಗೆ ಬಂದು ಹೆಣ್ಣು ಕೇಳಿದ್ರು. ಮನೆಯಲ್ಲಿ ಎಲ್ಲರಿಗೂ ಇಷ್ಟ ಆಯ್ತು... ಈ ಅವರು ಯಾರು ಅಂತ ಹೇಳಿಲ್ಲ ಅಲ್ವಾ... ಅವರ ಹೆಸರು ವಿಜಯ್.... 

 

ಆಮೇಲೆ ಹಿರಿಯರ ಸಮ್ಮುಖದಲ್ಲಿ ನಮ್ಮ ಮದುವೆ ಆಯ್ತು

( ತೆರಿ  ಚಲನಚಿತ್ರದ 'ಎನ್ ಜೀವನ್' ಹಾಡು ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಇದೆ ಎಂದು ಭಾವಿಸಿ ಆಯ್ತಾ???) 

ಆಮೇಲೆ ಅವರು ನನ್ನ ಒಳಗಿನ ಪ್ರತಿಭೆ ಹೊರ ತಂದರು... ಎಫ್ ಎಮ್ ನಲ್ಲಿ ಕೆಲಸ ಸಿಕ್ಕಿತು... ನಾವು ನಗುತ್ತಾ, ಇನ್ನೊಬ್ಬರನ್ನು ನಗಿಸುವುದು ಒಂದು ವರ... ಅದು ಎಲ್ಲರಿಗೂ ಸಿಗಲ್ಲ... ಎಂದು ಪ್ರೋತ್ಸಾಹ ನೀಡಿದರು... 

ಆಮೇಲೆ ಎಲ್ಲರ ಪ್ರೀತಿಯ ಆರ್ ಜೆ ಲಚ್ಚು ಆದೆ... 

 

ಯಾರು ಯಾರಿಗೆ ಸೇರಬೇಕು ಅಂತ ಆ ಭಗವಂತ ಮೊದಲೇ ನಿರ್ಧರಿಸಿರುತ್ತಾನೆ.... ನಮ್ಮನ್ನು ನಾವು ಹೇಗೆಯೋ ಹಾಗೆ ಸ್ವೀಕರಿಸುವವರು ನಮಗೆ ಸಿಕ್ಕೇ ಸಿಗುತ್ತಾರೆ ... ಅವರೇ ನಮ್ಮ ನಿಜವಾದ ಪ್ರೀತಿ.... 

 

ನಾನು ಇವತ್ತು ನಾನಾಗಿರುವುದಕ್ಕೆ ಕಾರಣ ಅವರು.... ನನ್ನ ಜೀವನದಲ್ಲಿ ನಾನು ತುಂಬಾ ಖುಷಿ ಪಟ್ಟ ದಿನ *ಅವನ ಪರಿಚಯವಾದ ಆ ದಿನ*

 

 

ನಾನು ಲಕ್ಷ್ಯ ವಿಜಯ್.... ನನ್ನ ಜೀವನದ ಕಥೆ ನಿಮಗೆ ಇಷ್ಟ ಆಗಬಹುದು ಎಂದು ಭಾವಿಸುತ್ತೇನೆ.... 

 

 

ಮುಕ್ತಾಯ....

 

ವಂದನಾ ಗಿರೀಶ್ - ಮಂಗಳೂರು